Publish Date: Wed, 17 Apr 2024 (17:57 IST)
Updated Date: Wed, 17 Apr 2024 (18:02 IST)
ಗೌರಿಬಿದನೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ. ಇನ್ನು ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಹೀಗಾಗಿ ಅವರೇ ಶೀಘ್ರದಲ್ಲೇ ತಮ್ಮ ಸರ್ಕಾರವನ್ನು ಕೆಡವಲಿದ್ದಾರೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಇಂದು ಗೌರಿಬಿದನೂರು ನಗರದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ಮತ ಯಾಚಿಸಿದರು.
ಭಾರತ ವಿಶ್ವದಲ್ಲೇ ನಂಬರ್ ವನ್ ಆಗಲು ಮತ್ತೇ ಮೋದಿ ಪ್ರಧಾನಿಯಾಗಲೇಬೇಕು. ಜನಪರ ಆಡಳಿತಕ್ಕೆ ಮತದಾರರು ನಾಂದಿ ಹಾಡಬೇಕು, ದೇಶದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನವರು ದೇಶವನ್ನು ಅಧೋಗತಿಗೆ ತಂದಿದ್ದರು. ಮೋದಿ ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ನಮ್ಮ ದೇಶದ ಕಡೆಗೆ ತಿರುಗಿ ನೋಡುವಂತಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸ್ಥಳೀಯರಾದ ಮಾಜಿ ಸಚಿವ ಎನ್. ಎಚ್. ಶಿವಶಂಕರರೆಡ್ಡಿ, ಮಾಜಿ ಸಂಸದ ಡಾ. ಎಂ. ವೀರಪ್ಪಮೊಯ್ಲಿಅವರಿಗೆ ಟಿಕೆಟ್ ನೀಡದೆ ಹಣವಂತರಿಗೆ, ಬೆಂಗಳೂರಿನವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದ ಬಗ್ಗೆ ಇವರಿಗೇನು ಗೊತ್ತಿದೆ ಎಂದು ಪ್ರಶ್ನಿಸಿದರು.