Publish Date: Thu, 18 Apr 2024 (12:12 IST)
Updated Date: Thu, 18 Apr 2024 (12:14 IST)
ಮಂಡ್ಯ: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ನಡೆಸಿದ್ದ ನಟ ದರ್ಶನ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.
ಸುಮಲತಾ ಅವರನ್ನು ಅಮ್ಮ ಎಂದೇ ದರ್ಶನ್ ಗೌರವಿಸುತ್ತಾರೆ. ಸುಮಲತಾ ಏನೇ ಹೇಳಿದರೂ ಮಾಡುತ್ತೇನೆ ಎನ್ನುತ್ತಾರೆ. ಆದರೆ ಸುಮಲತಾಗೆ ಈ ಬಾರಿ ಮಂಡ್ಯದಲ್ಲಿ ಟಿಕೆಟ್ ಸಿಕ್ಕಿಲ್ಲ. ಜೊತೆಗೆ ಅವರು ಬಿಜೆಪಿಗೆ ಸೇರಿಕೊಂಡಿದ್ದಾರೆ. ಮಂಡ್ಯದಿಂದ ಸುಮಲತಾ ವಿರೋಧಿ ಕುಮಾರಸ್ವಾಮಿ ಬಿಜೆಪಿ-ಜೆಡಿಎಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸುಮಲತಾಗೆ ಮಂಡ್ಯ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ದರ್ಶನ್ ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದು ಎಲ್ಲರೂ ಅನುಮಾನಪಡುವಂತೆ ಮಾಡಿದೆ.
ಇದೀಗ ಸ್ವತಃ ದರ್ಶನ್ ಎಲ್ಲಾ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿರುವುದಕ್ಕೆ ಕಾರಣ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ ದರ್ಶನ್, ನಾನು ಪಕ್ಷದ ಪರ ಬರುವುದಿಲ್ಲ, ವ್ಯಕ್ತಿ ಪರ ನಿಲ್ಲುತ್ತೇನೆ. ಮಾಧ‍್ಯಮದವರು ಏನೇನೋ ಹಾಕಿದರೆ ಕಷ್ಟ. ಸುಮಲತಾಗೆ ಟಿಕೆಟ್ ಸಿಕ್ಕಿಲ್ಲ, ಹೀಗಾಗಿ ನೀವು ನಮ್ಮ ಪರವಾಗಿ ಪ್ರಚಾರಕ್ಕೆ ಬರಬೇಕು ಎಂದು ಉದಯ ಗೌಡ್ರು ಹೇಳಿದ್ರು ಅದಕ್ಕೆ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್ ಚಂದ್ರುಗೆ ಮತ ನೀಡಿ ಉದಯ ಗೌಡ್ರು, ನರೇಂದ್ರ ಅವರ ಕೈ ಬಲಪಡಿಸಿ ಎಂದು ದರ್ಶನ್ ವಿವರಣೆ ನೀಡಿದ್ದಾರೆ.
ದರ್ಶನ್ ಈಗ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕಿಳಿದಿರುವುದರಿಂದ ಸುಮಲತಾಗೆ ಕುಮಾರಸ್ವಾಮಿ ಮೇಲಿನ ಮುನಿಸು ಇದಕ್ಕೆ ಕಾರಣವೇನೋ ಎಂಬ ಅನುಮಾನ ಮೂಡಿತ್ತು. ಆದರೆ ಅವರ ಈ ಸ್ಪಷ್ಟನೆ ಎಲ್ಲಾ ಅನುಮಾನಗಳಿಗೆ ಉತ್ತರ ನೀಡಿದೆ.