ಮಂಗಳೂರು : ಸತತ 2 ವಾರಗಳ ಮುಂಗಾರು ಆರ್ಭಟಕ್ಕೆ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ.
ಮಂಗಳೂರಿನ ಅದ್ಯಪಾಡಿಯ ಮುಗೇರ್ ಕುದ್ರು ಎಂಬ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಮನೆಯಂಗಳದಿಂದ ಮನೆಯೊಳಗೆ ನೆರೆ ನೀರು ನುಗ್ಗಲಾರಂಭಿಸಿದೆ. ಯಾವಾಗ ಮನೆಯೊಳಗೆ ನೀರು ನುಗ್ಗುತ್ತೆ ಅನ್ನೋ ಆತಂಕದಲ್ಲಿ ಜನ ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿದ್ದಾರೆ.
ಪೊಳಲಿ ಕ್ಷೇತ್ರದಿಂದ ಹರಿದು ಬರುವ ಫಲ್ಗುಣಿ ನದಿ ಉಕ್ಕಿ ಹರಿದು ಅದ್ಯಪಾಡಿಯ ಮೊಗೇರ್ ಗ್ರಾಮವನ್ನು ಮುಳುಗಡೆ ಮಾಡಿದೆ.
ದ್ವೀಪದಂತಾಗಿರುವ ಈ ಗ್ರಾಮದ ಸುಮಾರು 35ಕ್ಕೂ ಹೆಚ್ಚು ಮನೆಯಿರುವ ಇಲ್ಲಿನ ಜನ ಮನೆಯಿಂದ ಹೊರ ಬರದ ಪರಿಸ್ಥಿತಿಯಲ್ಲಿದ್ದಾರೆ. ಸಂಗ್ರಹಿಸಿಟ್ಟಿದ್ದ ದಿನ ಬಳಕೆ ವಸ್ತುಗಳನ್ನೇ ತಿಂದು ದಿನದೂಡುವ ಪರಿಸ್ಥಿತಿ ಎದುರಾಗಿದೆ.