ಉಡುಪಿ: ಕಳೆದ ವರ್ಷ ಕಾಪುವಿನ ಪಾಂಗಾಳದಲ್ಲಿ ನಡೆದ ಊರಿನ ಪ್ರಭಾವಿ ಯುವಕ ಶರತ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯೊಬ್ಬ ದಿಢೀರ್ ನ್ಯಾಯಾಲಯದ ಮುಂದೆ ಶರಣಾಗಿ ಆಶ್ಚರ್ಯಕ್ಕೆ ಕಾರಣವಾಗಿದೆ. ಇದೀಗ ಈ ಶರಣಾಗತಿಗೆ ದೈವದ ನುಡಿ ಕಾರಣ ಎಂಬ ಮಾತು ಕರಾವಳಿ ಭಾಗದಲ್ಲಿ ಕೇಳಿಬರುತ್ತಿದೆ.
ಘಟನೆ ಹಿನ್ನೆಲೆ: 2023ರ ಫೆಬ್ರವರಿ 5 ರಂದು ಉಡುಪಿಯ ಪಾಂಗಾಳದಲ್ಲಿ ನಡೆಯುತ್ತಿದ್ದ ಕೋಲದಲ್ಲಿ ಊರಿನವರು ಶ್ರದ್ದಾಭಕ್ತಿಯಿಂದ ಪಾಲ್ಗೊಂಡಿದ್ದರು. ಈ ವೇಳೆ ಹೆದ್ದಾರಿಯಲ್ಲೇ ಊರಿನ ಪ್ರಭಾವಿ ಯುವಕ ಶರತ್ ಶೆಟ್ಟಿಯನ್ನು ನಾಲ್ವರ ಗುಂಪೊಂದು ಡ್ಯಾಗರ್ನಿಂದ ಇರಿದು ಬರ್ಬರ ವಾಗಿ ಕೊಲೆ ಮಾಡಿತ್ತು. ಈ ಘಟನೆಯನ್ನು ಉಡುಪಿಯನ್ನೇ ಬೆಚ್ಚಿಬೀಳಿಸಿತ್ತು.
ಇನ್ನೂ ಕೊಲೆಯಾದ ಯುವಕ ಪೊಲೀಸ್ ಇಲಾಖೆ ಮತ್ತು ಭೂತಕ ಲೋಕದ ಜತೆ ನಂಟು ಹೊಂದಿದ್ದ. ಇನ್ನೂ ಶರತ್ ಕೊಲೆ ಆರೋಪಿಗಳು ಕಳೆದ ಒಂದು ವರುಷ ಮೂರು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು.
ಇದೀಗ ಏಕಾಏಕಿ ಪ್ರಮುಖ ಆರೋಪಿ ಯೋಗಿಶ್ ಆಚಾರ್ಯ ಮೇ 23 ರಂದು ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ತನ್ನ ವಕೀಲ ಕ್ಲಿಂಟನ್ ಡಿ.ಸಿಲ್ವ ಮೂಲಕ ಹಾಜರಾಗಿದ್ದಾನೆ. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ನೀಡಿದೆ. ಈತ ಒಂದು ವರುಷ ಮೂರು ತಿಂಗಳಿನಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದನು.
ಆರೋಪಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗಿದ್ದ ಶರತ್ ಕುಟುಂಬ: ಇನ್ನೂ ಶರತ್ ಕೊಲೆ ನಡೆದ ಬೆನ್ನಲ್ಲೇ ಆತನ ಕುಟುಂಬದವರು 2023 ಮಾರ್ಚ್ 24 ರಂದು ಪಾಂಗಾಳ ಶರತ್ ಶೆಟ್ಟಿಯ ಮನೆಯಲ್ಲಿ ಕುಟುಂಬಿಕರು ದೈವದ ನೇಮ ನಡೆಸಿದ್ದರು. ದೈವದ ಬಳಿ ಅವರು ಶರತ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಗ್ಗೆ ದೂರು ನೀಡಿ, ಅಳಲನ್ನು ತೋಡಿಕೊಂಡಿದ್ದರು. ದೈವವು ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡುವ ಅಭಯವನ್ನು ನೀಡಿತ್ತು.
ಇದೀಗ ದೈವದ ಅಭಯದಂತೆ ಆರೋಪಿ ಶರಣಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಆರೋಪಿಗೆ ತಲೆಮರೆಸಿಕೊಂಡಿರಲು ಸಹಾಯ ಮಾಡಿದವರನ್ನು ಪತ್ತೆಹಚ್ಚುತ್ತೇವೆ ಎಂದು ಉಡುಪಿ ಜಿಲ್ಲಾ ಎಸ್‌ಪಿ ಡಾ.ಅರುಣ್ ತಿಳಿಸಿದ್ದಾರೆ.