Publish Date: Tue, 05 Feb 2019 (16:26 IST)
Updated Date: Tue, 05 Feb 2019 (16:28 IST)
ಅಪ್ಪ ಹಾಗೂ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಜಮೀನು ವಿವಾದದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನು ಮಚ್ಚಿನಿಂದ ಕೊಚ್ಚಿ ಜೋಡಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊಸಕೋಟೆಯ ಮುತ್ತಕದಹಳ್ಳಿಯಲ್ಲಿ ನಡೆದಿದೆ.
ಮುತ್ತಕದಹಳ್ಳಿಯ ನಾರಾಯಣರೆಡ್ಡಿ(62), ಮತ್ತವರ ಪುತ್ರ ಲಿಂಗಾರೆಡ್ಡಿ(30)ಕೊಲೆಯಾದವರು. ಕೃತ್ಯವೆಸಗಿದ ಬಾಬು ಅನುಗೊಂಡನಹಳ್ಳಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಕೊಲೆಯಾದ ನಾರಾಯಣರೆಡ್ಡಿಯು ಆರೋಪಿ ಬಾಬು(35)ಗೆ ಮುತ್ತಕದಹಳ್ಳಿಯ ಸರ್ವೆ ನಂ.18 ರಲ್ಲಿ 2 ಎಕರೆ ಜಮೀನು ಮಾರಿದ್ದರು. ಆದರೆ ಅದನ್ನು ನೋಂದಣಿ ಮಾಡಿಕೊಟ್ಟಿರಲಿಲ್ಲ. ಅಂದಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಕಳೆದ 15ವರ್ಷಗಳಿಂದಲೂ ಜಮೀನು ವಿವಾದದ ಕುರಿತಾಗಿ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ವಿಚಾರಣೆ ಮುಗಿದು ತೀರ್ಪು ಹೊರಬರದಿದ್ದರಿಂದ ಆಕ್ರೋಶಗೊಂಡ ಬಾಬು ನಿನ್ನೆ ಸಂಜೆ ನಾರಾಯಣರೆಡ್ಡಿ ಹಾಗೂ ಆತನ ಮಗ ಲಿಂಗಾರೆಡ್ಡಿ ಜಮೀನಿನಲ್ಲಿ ನೀಲಿಗಿರಿ ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದಾಗ ಏಕಾಏಕಿ ಬಂದು ಜಗಳ ಮಾಡಿ ಕುರಿ ಕಡಿಯುವ ಮಚ್ಚಿನಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಅನುಗೊಂಡನಹಳ್ಳಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.