ಚೀನಿ ಡಿಜಿಟಲ್ ಆಪ್ ಗಳ ಮೂಲಕ ಸಾಲ ನೀಡುವ ಅಕ್ರಮ ಕಂಪನಿಗಳು ಜನರಿಗೆ ಕಿರುಕುಳ ನೀಡ್ತಿವೆ. ಈ ಕಂಪನಿಗಳು ಸಾಲ ನೀಡಿ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿವೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯಂತಹ ಹೆಜ್ಜೆ ಇಡಲು ಯತ್ನಿಸಿದಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ.ರಾಜಧಾನಿಯಲ್ಲಿ 2023ರಲ್ಲಿ ಲೋನ್ ಆ್ಯಪ್ ಕಂಪೆನಿಗಳ ಕಿರುಕುಳದ ಸಂಬಂಧ 900 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಒಂದೇ ಪ್ರಕರಣದಲ್ಲಿ 15 ಲೋನ್ ಆ್ಯಪ್‌ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಪೊಲೀಸರು ದೂರು ದಾಖಲಿಸಿದ್ದಾರೆ.ಸದ್ಯ ಪೊಲೀಸ್ರು ಈಸಿ ಮನಿ ಲೋನ್ ಆ್ಯಪ್, ಸ್ಯಾಲರಿ ಪ್ಲೀಸ್, ಈಸಿ ಲೋನ್, ಕ್ಯಾಸ್ ಮೀ, ಪ್ಯಾಕೆಟ್ ಮೀ,ಸೇರಿ ಅನೇಕ ಲೋನ್ ಆ್ಯಪ್‌ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿರುವ ಖಾಕಿ ಪಡೆಯು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಈ ಕಂಪನಿಗಳಿಂದ ಸಾವಿರಾರು ಮಂದಿ ಆನ್‌ಲೈನ್ ಲೋನ್ ಆ್ಯಪ್‌ಗಳಿಂದ ಸಾಲ ಪಡೆದು ವಂಚನೆಗೆ ಒಳಗಾಗುತ್ತಿದ್ದಾರೆ. ಈ ಪ್ರಕರಣಗಳ ಬೆನ್ನತ್ತಿದರೆ ಕರ್ನಾಟಕದವರೇ ಸಿಕ್ಕಿ ಬೀಳುತ್ತಿದ್ದಾರೆ. ಹೊರ ರಾಜ್ಯ, ವಿದೇಶದಲ್ಲಿ ಕುಳಿತು ನಕಲಿ ಜಾಲ ಸೃಷ್ಟಿಸಿರುವ ವಂಚಕರು ಪತ್ತೆಯಾಗುತ್ತಿಲ್ಲ. ಲೋನ್ ಆ್ಯಪ್ ಬ್ಯಾಂಕ್ ಖಾತೆಗಳಿಂದ ಈವರೆಗೆ 87 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತರಾದ ಶರಣಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.