ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಡುವ ಮೂಲಕ ಡಿಜಿಟಲ್ ಇಂಡಿಯಾ ಅನ್ನು ಹಿಮ್ಮೆಟ್ಟಿಸುವುದಕ್ಕೆ ಷಡ್ಯಂತ್ರ ಮಾಡಿದೆ ಎಂಬ ಅನುಮಾನ ಉಂಟಾಗುತ್ತಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಐ ಪಾವತಿಯಲ್ಲಿ ಜಾಗತಿಕ ದಾಖಲೆ ಬರೆದಿದೆ. ಆದರೆ ಕಾಂಗ್ರೆಸ್ ಸರ್ಕಾರದವರು ಜನರಿಗೆ ಆತಂಕ ಮತ್ತು ಭಯದ ವಾತಾವರಣ ನಿರ್ಮಿಸಿದ್ದಾರೆ. ಅಂದರೆ ಕೇಂದ್ರದ ಸರ್ಕಾರದ ಡಿಜಿಟಲ್ ವಹಿವಾಟು ಯೋಜನೆಯ ಪ್ರಯತ್ನಕ್ಕೆ ಭಯ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ನೋಟಿಸ್ ಪರಿಣಾಮದಿಂದ ಸಣ್ಣ ವ್ಯಾಪಾರಿಗಳು ಭಯಗೊಂಡು ಯುಪಿಐ ಪಾವತಿ ಇಲ್ಲ; ನಗದು ಮಾತ್ರ ಎಂದು ಬೋರ್ಡ್ ಹಾಕಿದ್ದಾರೆ. ಭಯಪಡಿಸಿದ ಪರಿಣಾಮ ಮಧ್ಯವರ್ತಿಗಳು ಮತ್ತು ಕೆಲವು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿರುವ ದೂರು ಕೂಡ ಬಂದಿದೆ. ಆದಕಾರಣ ರಾಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸನ್ನು ಸರ್ಕಾರ ಹಿಂಪಡೆದು ಭಯದ ವಾತಾವರಣದಿಂದ ಸಣ್ಣ ವ್ಯಾಪಾರಿಗಳನ್ನು ಪಾರು ಮಾಡಬೇಕೆಂದು ಅವರು ಆಗ್ರಹಿಸಿದರು.
ರಾಜ್ಯ ಸರಕಾರದ್ದೇ ಕೋತಿಯ ಪಾತ್ರ..
ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ಹಣಕಾಸು ಇಲಾಖೆಯ ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನಿರ್ದೇಶನದ ಮೇಲೆಯೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಉಪ ಮುಖ್ಯಮಂತ್ರಿಗಳು ಹೇಳಿದ ರೀತಿಯಲ್ಲಿ ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಇದೆ. ಆದರೆ ಇಲ್ಲಿ ಕೋತಿ ಯಾರು ಎಂದು ಪ್ರಶ್ನಿಸಿದರು.
ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಕೇಂದ್ರವನ್ನು ಏಕೆ ದೂರುತ್ತಿದ್ದೀರಿ ಎಂದು ಕೇಳಿದರು. ಇಲ್ಲಿ ಕೋತಿ ಕೆಲಸವನ್ನು ಮಾಡಿರುವುದು ನೀವು ಕೇಂದ್ರದ ಮೇಲೆ ತಪ್ಪು ಬರುವ ರೀತಿಯಲ್ಲಿ ನಿಮ್ಮ ಹೇಳಿಕೆಗಳು ತÀಪ್ಪು ಸಂದೇಶ ಕೊಡುತ್ತಿವೆ ಎಂದು ತಿಳಿಸಿದರು.
ಅಲ್ಲಿಗೆ ಕೋತಿ ಕೆಲಸ ಮಾಡಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ಬಹಳ ಸ್ಪಷ್ಟವಾಗಿದೆ. ಅದರಲ್ಲಿಯೂ 2020 ರಿಂದ ನೋಟಿಸ್ ನೀಡಿದ್ದಾರೆ. ನೀವು 2020 ರಿಂದ ನೋಟಿಸ್ ಕೊಡುವ ಕೆಲಸ ಮಾಡಿದ್ದೀರಿ. ಹಾಲು, ಹಣ್ಣು, ತರಕಾರಿ, ಮೊಟ್ಟೆ, ಮಾಂಸ, ಮೀನು, ಅಕ್ಕಿ, ರಾಗಿ, ಜೋಳ, ಗೋಧಿ, ಸಜ್ಜೆ, ನವಣೆ ಇತ್ಯಾದಿ ವ್ಯಾಪಾರ ಮಾಡುವವರಿಗೆ ತೆರಿಗೆ ವಿನಾಯಿತಿ ಇದೆ. ಆದರೆ ಕಾಂಗ್ರೆಸ್ ಸರ್ಕಾರ ಅವರಿಗೂ ನೋಟಿಸ್ ಕೊಟ್ಟಿದೆ ಎಂದು ದೂರಿದರು.
ಇಡೀ ದೇಶದಲ್ಲಿ ಸಣ್ಣ ವ್ಯಾಪಾರಸ್ಥರಿಗೆ ನೋಟಿಸ್ ಹೋಗಿಲ್ಲ. ಕರ್ನಾಟಕದಲ್ಲಿ ಮಾತ್ರ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಹೋಗಿದೆ. ಕೇರಳ, ಮಹಾರಾಷ್ಟ್ರ ಸೇರಿ ಎಲ್ಲಾ ಕಡೆ ನೋಟಿಸ್ ನೀಡಿದ್ದರೆ ಕೇಂದ್ರ ತೆಗೆದುಕೊಂಡಿರುವ ತೀರ್ಮಾನವೆಂದು ನೀವು ಆರೋಪ ಮಾಡಿದರೆ ಅದನ್ನು ಒಪ್ಪಬಹುದಾಗಿತ್ತು ಎಂದು ತಿಳಿಸಿದರು. ಮಹಾರಾಷ್ಟ್ರದಲ್ಲಿ ಸಣ್ಣ ವ್ಯಾಪಾರಿಗಳು, ಹೂವು, ತರಕಾರಿ, ಊಟದ ಗಾಡಿ, ಮಾಂಸವನ್ನು ಮಾರಾಟ ಮಾಡುವವರು ಇಂತಹವರಿಗೆ ನೋಟಿಸ್ ಹೋಗಿಲ್ಲ. ಕರ್ನಾಟಕದಲ್ಲಿ ಏಕೆ ನೋಟಿಸ್ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಸೇವಾ ವಲಯಕ್ಕೆ ತೆರಿಗೆ ವಿನಾಯಿತಿ ಇರುವಂತದ್ದು ವಾರ್ಷಿಕ ವಹಿವಾಟು ಒಂದೂವರೆ ಕೋಟಿ ರೂ ಮೀರಿದರೆ ಶೇ.1 ರಷ್ಟು ತೆರಿಗೆ. ಅದರಲ್ಲೂ ಶೇ.1 ರಲ್ಲಿ ಕೇಂದ್ರದ ಜಿಎಸ್‍ಟಿ ಶೇ.0.5 ರಷ್ಟು ಹೋದರೆ ರಾಜ್ಯದ ಎಸ್‍ಜಿಎಸ್‍ಟಿಗೆ ಶೇ.0.5 ರಷ್ಟು ಪಾವತಿಸುವ ಬಗ್ಗೆ ಪತ್ರಿಕೆಯಲ್ಲಿ ವಿವರವಾಗಿ ನಮೂದಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕೇಂದ್ರದ ನೀತಿಯ ಪರಿಣಾಮವೆಂದು ಏಕೆ ಆರೋಪ ಹೊರಿಸುತ್ತೀರಿ ಎಂದು ಕೇಳಿದರು.
ನಿಮ್ಮ ಸರ್ಕಾರದ ಎಡವಟ್ಟು ಎಂದು ಮೊದಲು ಒಪ್ಪಿಕೊಳ್ಳಿ. ನೀವು ಕೊಟ್ಟಿರುವ ನೋಟಿಸ್ ವಾಪಸ್ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಸಣ್ಣ ವ್ಯಾಪಾರಿಗಳು ಪ್ರತಿಭಟ£ ಹಮ್ಮಿಕೊಂಡಿದ್ದಾರೆ, ಸದರಿ ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲವಿದೆ. ಬಿಜೆಪಿ ಮುಖಂಡರು ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳಿ
ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ರಾಜಮಾರ್ಗಗಳು ಇವೆ. ಅದನ್ನು ಬಿಟ್ಟು ಸಣ್ಣ ವ್ಯಾಪಾರಿಗಳಿಗೆ ಬರೆಹಾಕುವ ಕೆಲಸವನ್ನು ಮಾಡಬೇಡಿ; ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಸಿ.ಟಿ. ರವಿ ಅವರು ಒತ್ತಾಯಿಸಿದರು. ಬೆಂಗಳೂರು ಐಟಿ ವಲಯದ ರಾಜಧಾನಿ. ಈ ಐಟಿ ವಲಯಕ್ಕೆ ಡಿಜಿಟಲ್ ಪಾವತಿ ಮಾದರಿಯಾಗಿತ್ತು. ತರಕಾರಿ ವ್ಯಾಪಾರ ಮಾಡುವವರು ಡಿಜಿಟಲ್‍ನಲ್ಲಿ ಪಾವತಿ ಮಾಡಿಕೊಳ್ಳುತ್ತಾರೆ ಎಂದು ಅಂತರಾಷ್ಟ್ರೀಯ ಸುದ್ದಿಯಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಸರ್ಕಾರ ಭಯಪಡಿಸುವ ನಿರ್ಧಾರದಿಂದ ವಾಪಸ್ ಸರಿಯಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಸುಪ್ರೀಂ ಕೋರ್ಟ್ ಪ್ರಮಾಣಪತ್ರ ನೀಡಿಲ್ಲ
ಸುಪ್ರೀಂ ಕೋರ್ಟ್ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟ ತೀರ್ಪು ನೀಡಿದೆ. ನಿಮ್ಮ ಅಧಿಕಾರ ದುರುಪಯೋಗಕ್ಕೆ ಪ್ರಮಾಣಪತ್ರ ನೀಡಿದೆ ಎಂದು ಭಾವಿಸಬೇಡಿ, ಸ್ವಜನ ಪಕ್ಷಪಾತಕ್ಕೆ ಪ್ರಮಾಣಪತ್ರ ನೀಡಿದೆ ಎಂದು ಭಾವಿಸಬೇಡಿ, ಭ್ರಷ್ಟಾಚಾರಕ್ಕೆ ಪ್ರಮಾಣಪತ್ರ ನೀಡಿದೆ ಎಂದು ಭಾವಿಸಬೇಡಿ. ಕೇವಲ ಇ.ಡಿ. ತನಿಖೆಗೆ ಮಾತ್ರ ತೀರ್ಪು ನೀಡಿದೆ. ಹಾಗಾಗಿ ಇ.ಡಿ. ತನಿಖೆಗೆ ಸಂಬಂಧಿಸಿದಂತೆ ಹೋರಾಟವನ್ನು ಸುಪ್ರಿಂ ಕೋರ್ಟ್ ಹೇಳಿರುವ ಮಾರ್ಗದಲ್ಲಿ ಮುಂದುವರೆಸುತ್ತೇವೆ ಎಂದು ಅವರು ತಿಳಿಸಿದರು.
ಈ ತೀರ್ಪನ್ನು ಆಧರಿಸಿ, ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿರುವುದರಿಂದ ಮೋದಿ ಮತ್ತು ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಆದರೆ, ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗಗಳ ಹೆಗ್ಗಳಿಕೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಡಿದ್ದೀರಿ ಎಂದು ದೂರಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನ್ಯಾಯಾಂಗದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಬದ್ಧತಾ ನ್ಯಾಯಾಂಗ ಇರಬೇಕು ಎಂದು ಫರ್ಮಾನು ಹೊರಡಿಸಿದ್ದರು. ಆಳುವ ಪಕ್ಷಕ್ಕೆ ಬದ್ಧತೆ ಇರಬೇಕೆಂದು ಹೇಳಿದ್ದವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ವಿರೋಧ ಪಕ್ಷಕ್ಕೆ ಮನವರಿಕೆ ಮಾಡುವುದನ್ನು ಬಿಟ್ಟು ತಮ್ಮ ಪಕ್ಷದ ಶಾಸಕÀರಾದ ರಾಜು ಕಾಗೆ, ಬಿ.ಆರ್ ಪಾಟೀಲ್, ದೇಶಪಾಂಡೆ ಅವರು ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅದರ ಬಗ್ಗೆ ಗಮನಹರಿಸಲಿ ಎಂದು ಒತ್ತಾಯಿಸಿದರು.
ಖಜಾನೆ ತುಂಬಿದ್ದರೆ ಎಲ್ಲ ವಸ್ತುಗಳ ದರ ಏರಿಸಿದ್ದೇಕೆ?
ಸರ್ಕಾರದಲ್ಲಿ ಖಜಾನೆ ತುಂಬಿ ತುಳುಕುತ್ತಿದ್ದರೆ ರಾಜ್ಯದಲ್ಲಿ ಬೆಲೆ ಏರಿಕೆ ಯಾತಕ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಪೆಟ್ರೋಲ್ ಮತ್ತು ಡೀಸಲ್ ಮೇಲೆ ಸೆಸ್ ವಿಧಿಸಿದ್ದೀರಿ, ವಿದ್ಯುತ್ ಯುನಿಟ್ ದರವನ್ನು ಏರಿಕೆ ಮಾಡಿದ್ದೀರಿ, ಹಾಲಿನ ಉತ್ಪನ್ನಗಳ ದರ ಏರಿಕೆ ಏಕೆ? ಮೆಟ್ರೋ ದರ, ಬಸ್ಸು ಪ್ರಯಾಣದ ದರ ಏರಿಸಿದ್ದೇಕೆ? ಹೀಗೆ ಎಲ್ಲ ಬೆಲೆ ಏರಿಕೆ ಮಾಡಿದ್ದರೂ ಈ ವರ್ಷದ ಬಜೆಟ್ಟಿನ ವಾರ್ಷಿಕ ಅಂದಾಜು ಒಂದು ಲಕ್ಷದ ಹದಿನಾರು ಸಾವಿರ ಕೋಟಿ ರೂ ಸಾಲವನ್ನು ಮಾಡಿ ಬಜೆಟ್ಟಿನ ಕೊರತೆ ತುಂಬಿಸುವ ಕೆಲಸ ಮಾಡಿದ್ದೀರಿ. ಆದರೆ ನಿಮಗೆ ನೀವೆ ಸಾಧನೆ ಮಾಡಿದ್ದೀರಿ ಎಂದು ಮೈಸೂರಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಎಂದು ಟೀಕಿಸಿದರು.
ಪ್ರಾಮಾಣಿಕ- ಪಾರದರ್ಶಕ ತನಿಖೆ ನಡೆಯಲಿ
ಧರ್ಮಸ್ಥಳ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಎಸ್‍ಐಟಿ ನೇಮಕ ಮಾಡಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ತನಿಖೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ನಡೆಯಲಿ. ತಪ್ಪು ಯಾರೇ ಮಾಡಿದ್ದರು ತಪ್ಪಿಗೆ ಶಿಕ್ಷೆಯಾಗಲಿ; ತನಿಖೆಗೆ ನಾವು ಮಧ್ಯಪ್ರವೇಶಿಸುವುದಿಲ್ಲ; ಆದರೆ ತನಿಖೆಗೆ ಮುನ್ನವೇ ಕೆಲವರು ತನಿಖೆ ನಡೆಸಿ ತೀರ್ಪು ಕೊಡುವ ಪ್ರವೃತ್ತಿ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದರು.
ಧರ್ಮಸ್ಥಳ ಎಂಬ ಸಂಸ್ಥೆಯನ್ನೇ ಅನುಮಾನಿಸುವ; ಸಂಸ್ಥೆಯ ಮುಖ್ಯಸ್ಥರನ್ನೇ ತಪ್ಪಿತಸ್ಥರೆಂಬಂತೆ ಬಿಂಬಿಸುವ ಷಡ್ಯಂತ್ರದ ವಿರುದ್ಧ ನಾವಿದ್ದೇವೆ. ಧರ್ಮಸ್ಥಳ ಟ್ರಸ್ಟ್ 293 ಪ್ರಾಚೀನಕಾಲದ ಚೋಳರ ಕಾಲದ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದೆ. ಅದರಲ್ಲಿ ಚಿಕ್ಕಮಗಳೂರು ಕ್ಷೇತ್ರದ ಅಂಬಳೆ, ಕಳಸಾಪುರ, ಕಡೆಕಾಲುವೆ ದೇವಾಲಯಗಳು, ಚೋಳರಕಾಲದ ಸುಗ್ಗಿಕಲ್ಲು ಪುನರ್ ನಿರ್ಮಾಣ ಮಾಡಿದೆ. ಸ್ವಯಂಸೇವಾ ಸಂಘಗಳ 55 ಲಕ್ಷ ಸದಸ್ಯರು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜೊತೆಗೆ ಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ; 900 ಕೆರೆಗಳ ಜೀರ್ಣೋದ್ಧಾರ ಕೆಲಸವನ್ನು ಮಾಡಿದೆ; 13900 ಸಾಮೂಹಿಕ ವಿವಾಹಗಳು ನೆರವೇರಿದೆ; ಇದೆಲ್ಲವೂ ಒಳ್ಳೆ ಕೆಲಸವಲ್ಲವೇ; 13 ಸಾವಿರ ದೇವಾಲಯಗಳಿಗೆ 144 ಕೋಟಿ ರೂ ಧನ ಸಹಾಯ ಮಾಡಿದ್ದಾರೆ ಎಂದು ವಿವರಿಸಿದರು.
ಭಕ್ತರು ನೀಡಿದ ಕಾಣಿಕೆಯಿಂದ ಧರ್ಮಸ್ಥಳ ಸಮಾಜದ ಭಾಗವಾಗಿ ತುಂಬಾ ಕೆಲಸವನ್ನು ಮಾಡಿದೆ. ಸರ್ಕಾರ ಈ ಕೆಲಸಗಳನ್ನು ಮಾಡಿಲ್ಲ. ಧರ್ಮಸ್ಥಳವೆಂದರೆ ಸಂಸ್ಕøತಿಯ ಒಂದು ಭಾಗ. ಮಂಜುನಾಥ ಸ್ವಾಮಿ ಶೈವ ಪರಂಪರೆಗೆ ಸೇರಿದ್ದರೆ ವೈಷ್ಣವ ಪರಂಪರೆಯ ಆರ್ಚಕರು ಪೂಜಿಸುತ್ತಾರೆ. ಜೈನ ಪರಂಪರೆಯವರು ನೇತೃತ್ವ ವಹಿಸುತ್ತಾರೆ. ಧರ್ಮಸ್ಥಳ ಸಂಸ್ಥೆ ನೀಡುತ್ತಿರುವ ಶಿಕ್ಷಣ, ಆರೋಗ್ಯದ ಕಾಳಜಿಯನ್ನು ಆಧರಿಸಿ ಹೊಗಳಿದ್ದೇನೆ ಎಂದು ತಿಳಿಸಿದರು.
ಧರ್ಮಸ್ಥಳದ ತೇಜೋವಧೆ ಮಾಡುವುದನ್ನು ಅಥವಾ ವಿಚಾರಣೆ ಇಲ್ಲದೆ ಗಲ್ಲಿಗೇರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನುಮುಂದೆಯೂ ಇದನ್ನು ಮುಂದುವರೆಸಿದರೆ ನಾವು ಬಿಡುವುದಿಲ್ಲ. ಸಜ್ಜನರ ಮೌನ ದುರ್ಜನರಿಗೆ ದಾರಿಯಾಗುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು.