Select Your Language

Notifications

webdunia
webdunia
webdunia
webdunia

ಆಪರೇಷನ್ ಸಿಂಧೂರ್ ಬಗ್ಗೆ ಅಪಪ್ರಚಾರ ಮಾಡಲು ಕಾಂಗ್ರೆಸ್ ನಾಯಕರಿಗೆ ಟಾಸ್ಕ್

CT Ravi

Krishnaveni K

ಬೆಂಗಳೂರು , ಶುಕ್ರವಾರ, 16 ಮೇ 2025 (14:49 IST)
ಬೆಂಗಳೂರು: ‘ಆಪರೇಷನ್ ಸಿಂದೂರ’ದ ವಿಷಯದಲ್ಲಿ ಕಾಂಗ್ರೆಸ್ ನಾಯಕರಲ್ಲೇ ದ್ವಂದ್ವ ಕಾಣಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಕೆಲವು ನಾಯಕರು, ಸಚಿವರು ‘ಆಪರೇಷನ್ ಸಿಂದೂರ’ದ ಕುರಿತು ಅಪಸ್ವರ ಎತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಭಯೋತ್ಪಾದನೆಯನ್ನು ಕಿತ್ತು ಹಾಕಬೇಕು. ಯಾಕೆ ಯುದ್ಧ ನಿಲ್ಲಿಸಿದಿರಿ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ನಾಲ್ಕು ವಿಮಾನ ಹಾರಿ ಹೋಗಿದೆ; ಅದು ಹೀಗೆ ಹಾಗೆ ಎಂದು ಹೇಳಿದರೆ ಸಾಕೇ ಎಂದಿದ್ದಾರೆ ಎಂದು ಟೀಕಿಸಿದರು.
 
ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಕೃಷ್ಣಬೈರೇಗೌಡ, ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗಳನ್ನು ಗಮನಿಸಿದರೆ ‘ಆಪರೇಷನ್ ಸಿಂದೂರ’ದ ಕುರಿತು ಅಪಪ್ರಚಾರದ ಟಾಸ್ಕನ್ನೇ ಇವರಿಗೆ ಕೊಟ್ಟಂತೆ ಕಾಣುತ್ತಿದೆ. ಸೇನಾ ಕಾರ್ಯಾಚರಣೆ ವಿಷಯದಲ್ಲಿ ಕಾಂಗ್ರೆಸ್ ನಾಯಕರಲ್ಲೇ ದ್ವಂದ್ವ ಕಾಣುತ್ತಿದೆ ಎಂದು ಆಕ್ಷೇಪಿಸಿದರು.
 
‘ಆಪರೇಷನ್ ಸಿಂದೂರ’ದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದೇಕೆ?
ಒಂದು ಕಡೆ ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ ಅವರು ಭಾರತ ಸರಕಾರದ ಜೊತೆ ನಾವಿದ್ದೇವೆ; ಇವೆಲ್ಲ ಸಂದರ್ಭೋಚಿತ ಕ್ರಮ ಎಂದು ಶ್ಲಾಘಿಸುತ್ತಿದ್ದಾರೆ. ಇನ್ನೊಂದು ಕಡೆ ಇಡೀ ದೇಶ ಯುದ್ಧ ಬೇಕು ಎನ್ನುವಾಗ ನಮ್ಮ ಸಿದ್ದರಾಮಯ್ಯನವರು ಯುದ್ಧ ಬೇಡ ಎಂಬ ಸಂದೇಶ ಕೊಟ್ಟು ಸಾರ್ವಜನಿಕರ ಟೀಕೆಗೆ ಒಳಗಾದ ನಂತರ ಹಣೆ ಮೇಲೆ ದೊಡ್ಡ ಕುಂಕುಮ ಅಂಟಿಸಿಕೊಂಡು ‘ಆಪರೇಷನ್ ಸಿಂದೂರ’ದ ಕ್ರೆಡಿಟ್ ಪೂರ್ತಿ ಸೇನೆಗೆ ಎಂದಿದ್ದಾರೆ. ನನ್ನ ಹಣೆಯಲ್ಲಿ ದಿನವೂ ಕುಂಕುಮ ಇರುತ್ತದೆ. ಆದರೆ, ಸಿದ್ದರಾಮಯ್ಯನವರು ಕುಂಕುಮ ಕಂಡರೆ ಹೆದರಿಕೆ ಆಗುತ್ತದೆ ಎಂದು ಹೇಳಿಕೆ ಕೊಟ್ಟವರು ಎಂದು ಸಿ.ಟಿ.ರವಿ ಅವರು ಗಮನ ಸೆಳೆದರು.
 
ಈಗ ಕಾಂಗ್ರೆಸ್ಸಿನವರು ‘ಆಪರೇಷನ್ ಸಿಂದೂರ’ದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದೇಕೆ? ಇವರ ಉದ್ದೇಶ ಏನು? ನಿಮ್ಮ ಅಪಪ್ರಚಾರ ಸೈನ್ಯದ ಬಗ್ಗೆ ಇದೆಯೇ ಅಥವಾ ರಾಜಕೀಯ ನೇತೃತ್ವದ ಬಗ್ಗೆಯೇ ಎಂದು ಪ್ರಶ್ನಿಸಿದರು. ನಮ್ಮ ಪ್ರಧಾನಿಯವರು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಕಾರ್ಯತಂತ್ರ ರೂಪಿಸಲು ತಿಳಿಸಿದ್ದಾರೆ. ರಾಜತಾಂತ್ರಿಕವಾಗಿ ಪಾಕ್ ಜೊತೆಗಿನ ಎಲ್ಲ ಸಂಬಂಧವನ್ನೂ ಕಡಿತಗೊಳಿಸಿ, ಸಿಂಧೂ ಜಲ ಒಪ್ಪಂದ ರದ್ದುಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಒಂದು ಭಯೋತ್ಪಾದಕರ ರಾಷ್ಟ್ರ ಎಂಬುದನ್ನು ನಿರೂಪಿಸಿ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗದಂತೆ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.
 
ಭಯೋತ್ಪಾದಕರ ದಾಳಿ ನಡೆದ ಬಳಿಕ ಬರೀ ಹೇಳಿಕೆ ಕೊಟ್ಟು ಸುಮ್ಮನಾಗಿಲ್ಲ. ಭಯೋತ್ಪಾದಕರ 9 ನೆಲೆಗಳನ್ನು ಧ್ವಂಸ ಮಾಡಿ ನೂರಾರು ಜನ ಭಯೋತ್ಪಾದಕರನ್ನು ಅವರು ನಂಬುವ ಜನ್ನತ್ತಿಗೆ ಕಳಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಜನ್ನತ್ ಸಿಗುವುದಿಲ್ಲ; ನರಕವೇ ಸಿಗಲಿದೆ ಎಂದು ನುಡಿದರು. 14 ಕ್ಕೂ ಹೆಚ್ಚು ವಾಯುನೆಲೆಯನ್ನು ಧ್ವಂಸ ಮಾಡಿದ್ದಾರೆ. ಇದೆಲ್ಲವೂ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಬಳಿಕ ಆಗಿದೆ ಎಂದು ವಿಶ್ಲೇಷಿಸಿದರು.
 
ಹೆಚ್ಚು ಜನರು ಸತ್ತಾಗ ಕಾಂಗ್ರೆಸ್ ಸರಕಾರ ಏನು ಮಾಡಿತ್ತು?
26 ಜನರ ಸಾವಿಗೆ, ಅವರ ಮಾಂಗಲ್ಯ ಕಿತ್ತುಕೊಂಡಿದ್ದಕ್ಕೆ ಇಷ್ಟೇನಾ ಪರಿಹಾರ? ಭಯೋತ್ಪಾದನೆ ಬೇರು ಸಹಿತ ಹೋಗಲೇಬೇಕು ಎಂದು ಕೋಲಾರ ಶಾಸಕರು ಹೇಳಿದ್ದಾರೆ. 2005ರಲ್ಲಿ ದೆಹಲಿ ಸರಣಿ ಸ್ಫೋಟ ಆಗಿ 70 ಜನ ಸತ್ತಿದ್ದರು. ಏನು ಪ್ರತಿಕ್ರಿಯೆ ಕೊಟ್ಟಿರಿ? ಯಾವ ಸರ್ಜಿಕಲ್ ಸ್ಟ್ರೈಕ್ ಮಾಡಿದಿರಿ ಎಂದು ಸಿ.ಟಿ.ರವಿ ಅವರು ಕೇಳಿದರು.

2006ರಲ್ಲಿ ವಾರಣಾಸಿಯಲ್ಲಿ ಬಾಂಬ್ ಸ್ಫೋಟಿಸಿ 28 ಜನ ಸತ್ತಿದ್ದರು. ಪ್ರತಿಕ್ರಿಯೆ ಏನು? 2006ರಲ್ಲಿ ಮುಂಬೈ ರೈಲುಗಳಲ್ಲಿ ಸರಣಿ ಸ್ಫೋಟ ಆಗಿ 209 ಜನ ಸತ್ತಿದ್ದರು. ಯಾವ ಯುದ್ಧ ಮಾಡಿದಿರಿ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. 2006 ಮಾಲೆಗಾಂವ್ ಸ್ಫೋಟದಲ್ಲಿ 40 ಜನರು ಸತ್ತಿದ್ದು, ಏನು ಕ್ರಮ ಕೈಗೊಂಡಿರಿ ಎಂದು ಪ್ರಶ್ನೆ ಮಾಡಿದರು. 2007ರಲ್ಲಿ ಸಂಜೋತಾ ಎಕ್ಸ್‍ಪ್ರೆಸ್ ಸ್ಫೋಟದಲ್ಲಿ 70 ಜನರ ಸಾವು ಸಂಭವಿಸಿತ್ತು ಏನು ಮಾಡಿದಿರಿ ಎಂದು ಕೇಳಿದರು.
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಇದು ಜಸ್ಟ್‌ ಟ್ರೇಲರ್‌, ಸಿನಿಮಾ ಬಾಕಿಯಿದೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ