ಬೆಂಗಳೂರು: ರಾಜ್ಯ ಸರಕಾರವು ಮೊದಲು ನೆರೆ ಪರಿಹಾರ ನೀಡಿ ಬಳಿಕ ಕೇಂದ್ರದಿಂದ
ಪರಿಹಾರ ಕೇಳಬೇಕಿತ್ತು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಪ್ರಧಾನಿಯವರದು ಮತ್ತು ಮುಖ್ಯಮಂತ್ರಿಗಳದು ಸಾಂವಿಧಾನಿಕ ಹುದ್ದೆಗಳು. ಅವರ ಪರಸ್ಪರ ಭೇಟಿ, ಮಾತುಕತೆಯನ್ನು ರಾಜಕೀಯ ದೃಷ್ಟಿಯಿಂದ ನೋಡಲಾಗದು; ನೋಡಬಾರದು ಎಂದು ಪ್ರಶ್ನೆಗೆ ಉತ್ತರಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನೆರೆ ಪರಿಹಾರವಾಗಿ ರಾಜ್ಯದ ಬೊಕ್ಕಸದಿಂದ ಹಣ ನೀಡಿ ಬಳಿಕ ಕೇಂದ್ರದಿಂದ ಕೇಳುವ ವಾಡಿಕೆಯನ್ನು ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಮಾಡಿದ್ದಾರೆ. ಬೇರೆ ಬೇರೆ ಮುಖ್ಯಮಂತ್ರಿಗಳೂ ಇದನ್ನೇ ಮಾಡಿದ್ದರು. ಕೇಂದ್ರ ಎನ್‍ಡಿಆರ್‍ಎಫ್ ನಿಯಮದಡಿ ಸಮೀಕ್ಷೆ ಮಾಡಿ ಕೊಡಬೇಕಾದುದನ್ನು ಕೊಟ್ಟೇ ಕೊಡುತ್ತದೆ. ಅದಕ್ಕೂ ಮೊದಲು ರಾಜ್ಯದ ಬೊಕ್ಕಸದಿಂದ ಬಿಡುಗಡೆ ಮಾಡುವುದು ಎಲ್ಲ ಮುಖ್ಯಮಂತ್ರಿಗಳು, ಸರಕಾರಗಳು ಪಾಲಿಸಿಕೊಂಡು ಬಂದ ಪದ್ಧತಿ. ಅದನ್ನು ಮುಖ್ಯಮಂತ್ರಿಗಳು ಮಾಡಬೇಕಿತ್ತು ಎಂದು ನುಡಿದರು.
ಕಬ್ಬಿನ ವಿಚಾರದಲ್ಲಿ ಕಬ್ಬು ತುಂಬಿಕೊಂಡ ನೂರಾರು ಟ್ರ್ಯಾಕ್ಟರ್‍ಗಳಿಗೆ ಬೆಂಕಿ ಹಾಕಿದ್ದರು. ಯಾರು ಬೆಂಕಿ ಹಾಕಿದ್ದರು? ಯಾರ ಹಿತಾಸಕ್ತಿ ಇದರ ಹಿಂದಿದೆ? ಎಂದು ಪ್ರಶ್ನಿಸಿದರು. ಮಾತುಕತೆ ವೇಳೆ ರೈತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ; ಸಕ್ಕರೆ ಕಾರ್ಖಾನೆ ಮಾಲೀಕರೂ ನಿಮ್ಮ ತೀರ್ಮಾನ ಒಪ್ಪದಿದ್ದರೆ ನಿಮ್ಮ ಏಕಪಕ್ಷೀಯ ತೀರ್ಮಾನಕ್ಕೆ ಏನು ಬೆಲೆ ಎಂದು ಕೇಳಿದರು. ಸರಕಾರದ ದಪ್ಪ ಚರ್ಮದಿಂದ ರೈತರು ಇನ್ನೂ ಬೀದಿಯಲ್ಲೇ ಇದ್ದಾರೆ ಎಂದು ಗಮನ ಸೆಳೆದರು.
ಜನಮಾನಸದಲ್ಲಿ ಒಂದು ಪ್ರಮುಖ ವಿಚಾರ ಚರ್ಚೆಗೆ ಬಂದಾಗ ಮುಖ್ಯಮಂತ್ರಿ ಬದಲಾವಣೆಯ ವಿಷಯವನ್ನು ಮುನ್ನೆಲೆಗೆ ತರುತ್ತಾರೆ. ಇದೊಂದು ರಾಜಕೀಯ ಕಾರ್ಯತಂತ್ರದಂತಿದೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ನಮಗೇನು? ಯಾರು ಸಿಎಂ ಆದರೇನು? ಬಿಜೆಪಿಗೆ ಅದೇನೂ ಸಂಬಂಧವಿಲ್ಲ; ನಾವು ಕಾಂಗ್ರೆಸ್ ಥರ ಕಾಂಗ್ರೆಸ್ಸೇತರ ಸರಕಾರವನ್ನು ಅಸ್ಥಿರಗೊಳಿಸುವ ರಾಜಕಾರಣದ ವಿಷಯದಲ್ಲಿ ನಂಬಿಕೆ ಇಟ್ಟಿಲ್ಲ. 90ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್ಸೇತರ ಸರಕಾರವನ್ನು ವಜಾ ಮಾಡಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕಿದೆ. ಒಟ್ಟು 120- 122 ಬಾರಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದ್ದರೆ ಅದರಲ್ಲಿ 90ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ಸೇತರ ಸರಕಾರವನ್ನು ರಾಜಕೀಯ ಕಾರಣಕ್ಕೆ ವಜಾ ಮಾಡಿದ ಕುಖ್ಯಾತಿ ಪಡೆದಿದೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ನೆಹರೂ ಅವರು, ಕೇರಳದಲ್ಲಿ 1958ರಲ್ಲಿ ನಂಬೂದರಿಪಾಡ್ ನೇತೃತ್ವದ ಮೊದಲ ಕಾಂಗ್ರೆಸ್ಸೇತರ ಸರಕಾರವನ್ನು ವಜಾ ಮಾಡಿದ್ದರು. ಅಲ್ಲಿಂದ ರಾಜಕೀಯ ಕಾರಣಕ್ಕೆ ಕಾಂಗ್ರೆಸ್ಸೇತರ ಸರಕಾರವನ್ನು ವಜಾ ಮಾಡುವುದು ಆರಂಭವಾಗಿತ್ತು ಎಂದು ಗಮನ ಸೆಳೆದರು. ಕರ್ನಾಟಕದಲ್ಲಿ ಎಸ್.ಆರ್. ಬೊಮ್ಮಾಯಿಯವರ ಸರಕಾರವನ್ನು ವಜಾ ಮಾಡಿದ್ದರು. ಇಂಥ ಕುಖ್ಯಾತಿ ಕಾಂಗ್ರೆಸ್ಸಿಗಿದೆ. ಆದರೆ, ಮೋದಿಯವರು ಇಂಥ ಕ್ರಮ ಕೈಗೊಂಡಿದ್ದಾರಾ ಎಂದು ಕೇಳಿದರು.
ಇದು ಕೆಟ್ಟ ಸರಕಾರ. ಶಾಸಕರ ಬಹುಮತ ಇದೆ. ಅದನ್ನು ಬೀಳಿಸುವುದರಲ್ಲಿ ನಮಗೇನೂ ಆಸಕ್ತಿ ಇಲ್ಲ ಎಂದು ತಿಳಿಸಿದರು. ಅವರಾಗಿಯೇ ಬಿದ್ದರೆ ಅದವರ ಹಣೆಬರೆಹ ಎಂದು ತಿಳಿಸಿದರು.