Select Your Language

Notifications

webdunia
webdunia
webdunia
webdunia

ಆರೆಸ್ಸೆಸ್ ವಿಚಾರದಲ್ಲಿ ಸಾರ್ವಜನಿಕ ಚರ್ಚೆಗೆ ಬನ್ನಿ: ಪ್ರಿಯಾಂಕ್ ಖರ್ಗೆಗೆ ಸಿ.ಟಿ.ರವಿ ಆಹ್ವಾನ

CT Ravi

Krishnaveni K

ಬೆಂಗಳೂರು , ಸೋಮವಾರ, 13 ಅಕ್ಟೋಬರ್ 2025 (16:18 IST)
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರು ನಿನ್ನೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಸಾರ್ವಜನಿಕ ಚರ್ಚೆ ಮಾಡಲು ಆಹ್ವಾನಿಸುವುದಾಗಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದ್ದಾರೆ.

 ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ನಕಾರಾತ್ಮಕ ಭಾವನೆಗಳನ್ನು ಬಿತ್ತುತ್ತದೆ; ಗಲಭೆ ಹುಟ್ಟುಹಾಕುತ್ತದೆ ಎಂಬ ಮಾತನ್ನು ಹೇಳಿದ್ದಾರೆ. 100 ವರ್ಷದ ಇತಿಹಾಸದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಭಯೋತ್ಪಾದನೆ ಮಾಡಿದ ಇತಿಹಾಸ ಇಲ್ಲ. ಸಮಾಜ ಪರಿವರ್ತನೆ ಮಾಡಿದ, ಭೂಕಂಪ, ಪ್ರವಾಹದಂಥ ಆಪತ್ತಿನ ಸಂದರ್ಭದಲ್ಲಿ ನೆರವಿಗೆ ನಿಂತ ನೂರಾರು ಉದಾಹರಣೆಗಳಿವೆ ಎಂದು ವಿವರಿಸಿದರು.

ಆರೆಸ್ಸೆಸ್ ಪ್ರೇರಣೆಯಿಂದ ಚಾಲನೆಗೊಂಡ ಸಂಘಟನೆಗಳು ಇವತ್ತು ಜನಮನ್ನಣೆಯನ್ನು ಗಳಿಸಿವೆ. ಜನಪ್ರೀತಿಗೆ ಪಾತ್ರವಾಗಿ ತನ್ನದೇ ಆದ ಮನ್ನಣೆ ಪಡೆದುದನ್ನು ನೋಡಬಹುದು ಎಂದು ಹೇಳಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೆಸ್ಸೆಸ್ ಪ್ರೇರಣೆಯಿಂದ ಹುಟ್ಟಿದ ಸಂಘಟನೆ. ಭಾರತೀಯ ಮಜ್ದೂರ್ ಸಂಘ, ಭಾರತೀಯ ಜನತಾ ಪಾರ್ಟಿ ಕೂಡ ಆರೆಸ್ಸೆಸ್ ಪ್ರೇರಣೆಯಿಂದ ಹುಟ್ಟಿವೆ ಎಂದು ಮಾಹಿತಿ ನೀಡಿದರು.

ಪ್ರತಿ ಹಿಂದೂ ಸೋದರ ಸಮಾಜರು ಎಂಬ ಭಾವೈಕ್ಯತೆಯ ಸಂದೇಶವನ್ನು ವಿಶ್ವ ಹಿಂದೂ ಪರಿಷತ್ ಸಾರಿದೆ. ಹೀಗೆ ಸೇವಾ ಭಾರತಿ, ವಿದ್ಯಾ ಭಾರತಿಯಂಥ ಸಂಘಟನೆಗಳು ಸಮಾಜಕ್ಕೆ ತನ್ನದೇ ಆದ ಸಕಾರಾತ್ಮಕ ಕೊಡುಗೆಗಳನ್ನು ಕೊಡುತ್ತಿವೆ ಎಂದರು. ಹೀಗೆ ಸಕಾರಾತ್ಮಕ ಕೊಡುಗೆಗಳನ್ನು ಕೊಡುತ್ತಿರುವ ಸಂಘಟನೆಗಳನ್ನು ನೀವು ನಕಾರಾತ್ಮಕ ಎನ್ನುವುದೇ ನಿಮ್ಮ ಮನಸ್ಸಿನ ನಕಾರಾತ್ಮಕ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
 
ನೀವು ಕಷ್ಟ ಪಟ್ಟಿಲ್ಲ; ಅಪ್ಪನ ರಾಜಕೀಯ ವಾರೀಸುದಾರಿಕೆ ಅಚಾನಕ್ಕಾಗಿ ತಮಗೆ ಸಿಕ್ಕಿದೆ. ಪರಿಶ್ರಮ ಪಟ್ಟು, ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಜನಮನ್ನಣೆ ಪಡೆದು, ಜನಾಂದೋಲನದ ಮೂಲಕ ಜನನಾಯಕರಾದವರು ನೀವಲ್ಲ ಎಂದು ಟೀಕಿಸಿದರು. ನಿಮಗೆ ರಾಜಕೀಯ ವಾರೀಸುದಾರಿಕೆಯ ಜೊತೆಗೇ ಬೇರೆ ಬೇರೆ ವಾರೀಸುದಾರಿಕೆ ಅಚಾನಕ್ಕಾಗಿ ತಮಗೆ ಸಿಕ್ಕಿವೆ. ಅದು ಸಿಕ್ಕಿರುವ ಅಹಂನಲ್ಲಿ ಅಸಂಬದ್ಧವಾಗಿ ಮಾತನಾಡುವಂತೆ ಅನಿಸುತ್ತಿದೆ ಎಂದು ಆಕ್ಷೇಪಿಸಿದರು.
 
ಬಸವ ತತ್ವ ನಿಮ್ಮದೆನ್ನುತ್ತೀರಿ. ಭ್ರಷ್ಟಾಚಾರದ ಕಳಂಕವೇ ನಿಮ್ಮ ಪಕ್ಷಕ್ಕಿದೆ. ಭ್ರಷ್ಟಾಚಾರದ ಪಿತಾಮಹರೇ ನಿಮ್ಮ ಪಾರ್ಟಿಯವರಾಗಿದ್ದೀರಿ. ಕಳಬೇಡ ಎಂಬುದು ನಿಮಗೆ ಹೇಗೆ ಅನ್ವಯವಾಗುತ್ತದೆ ಎಂದು ಪ್ರಶ್ನಿಸಿದರು. ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ಮೊಕದ್ದಮೆ ವಾಪಸ್ ಪಡೆಯುವ ಮೂಲಕ ಭಯೋತ್ಪಾದನೆಯನ್ನೇ ಉಸಿರಾಗಿಸಿಕೊಳ್ಳುವವರಿಗೆ ಬೆಂಬಲ ಕೊಡುವ ಕುಖ್ಯಾತಿ ನಿಮ್ಮ ಪಾರ್ಟಿಗಿದೆ ಎಂದು ಟೀಕಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಸಹೋದರಿ ಬಿಹಾರದಲ್ಲಿ ಚುನಾವಣಾ ಕಣಕ್ಕೆ: ಯಾವ ಪಕ್ಷದಿಂದ ಇಲ್ಲಿದೆ ಮಾಹಿತಿ