Select Your Language

Notifications

webdunia
webdunia
webdunia
webdunia

ಸಿಟಿ ರವಿಯನ್ನು ಕರೆದೊಯ್ಯುವಾಗ ಪೊಲೀಸರ ಸೀಕ್ರೆಟ್ ಫೋನ್ ಮಾತುಕತೆ ವಿಡಿಯೋ ವೈರಲ್

CT Ravi

Krishnaveni K

ಬೆಂಗಳೂರು , ಶನಿವಾರ, 21 ಡಿಸೆಂಬರ್ 2024 (16:07 IST)
ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಿಂದಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಶಾಸಕ ಸಿಟಿ ರವಿಯನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರು ವಾಹನ ನಿಲ್ಲಿಸಿ ಫೋನ್ ನಲ್ಲಿ ಮಾತುಕತೆ ನಡೆಸುವ ವಿಡಿಯೋವನ್ನು ಬಿಜೆಪಿ ಹರಿಯಬಿಟ್ಟಿದೆ.
 

ಸಿಟಿ ರವಿಯನ್ನು ಬಂಧಿಸಿದ ಬಳಿಕ ಪೊಲೀಸರು ರಾತ್ರಿಯಿಡೀ ಪೊಲೀಸ್ ವಾಹನದಲ್ಲೇ ಸುತ್ತಾಡಿಸಿದ್ದರು. ಅವರನ್ನು ಹಿಂಬಾಲಿಸಿ ಬಿಜೆಪಿ ಕಾರ್ಯಕರ್ತರು, ಮಾಧ್ಯಮಗಳೂ ಇದ್ದರು. ಆದರೂ ಪೊಲೀಸರ ನಡೆ ಸಂಶಯಾಸ್ಪದವಾಗಿತ್ತು.

ಬಂಧನದ ಬಳಿಕ ರಾತ್ರಿಯಿಡೀ ಊರಿಡೀ ಸುತ್ತಾಡಿಸಿದ್ದು ಯಾಕೆ, ಯಾರು ನಿರ್ದೇಶನ ನಿಡುತ್ತಿದ್ದರು ಎಂಬ ಬಗ್ಗೆ ಸಿಟಿ ರವಿಯವರು ಇಂದು ಪತ್ರಿಕಾಗೋಷ್ಠಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಫೋನ್ ಮಾತುಕತೆಯ ವಿಡಿಯೋವನ್ನೂ ಬಿಜೆಪಿ ಹಂಚಿಕೊಂಡಿದೆ. ಸಿಟಿ ರವಿ ಮಾತಿನ ಸಂಪೂರ್ಣ ವಿವರ ಇಲ್ಲಿದೆ.

ಇದೇ 19ರ ರಾತ್ರಿ ನನ್ನ ಮೇಲಿನ ಹಲ್ಲೆ ಕುರಿತ ದೂರು ಕೊಟ್ಟೆ, ಎಫ್‍ಐಆರ್ ಬುಕ್ ಮಾಡಲೇ ಇಲ್ಲ; ಹೋಗಿ ಬಂದು ಫೋನಿನಲ್ಲಿ ಮಾತನಾಡುತ್ತಿದ್ದರು. ನನ್ನನ್ನು ಐಸೋಲೇಟ್ ಮಾಡಿದರು. ಹೊರಗಡೆ ಸೇಫಾಗಿ ಕರೆದುಕೊಂಡು ಹೋಗುವುದಾಗಿ ಹೇಳಿ ಎತ್ತಿಕೊಂಡು ಪೊಲೀಸ್ ಸ್ಕಾರ್ಪಿಯೊದಲ್ಲಿ ತುಂಬಿದರು. ಆಗ ಲಾಠಿಯಿಂದ ಹೊಡೆತ ಬಿತ್ತೋ ಹೇಗಾಯಿತೋ ಗೊತ್ತಿಲ್ಲ; ರಕ್ತ ಬರಲಾರಂಭಿಸಿತ್ತು. ಆಗ ರಾತ್ರಿ 11.45 ಸಮಯ ಇರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿಂದ ನಂದಗಡ, ಕಿತ್ತೂರಿಗೆ ಕರೆದೊಯ್ದರು. ಕುಡಿಯಲು ನೀರು ಕೊಡಿ ಎಂದರೆ, ವಾಂತಿ ಆಗುವಂತಿದೆ ಎಂದು ತಿಳಿಸಿದರೆ ವಾಹನದಲ್ಲಿ ನೀರೇ ಇರಲಿಲ್ಲ. ಫೋನ್ ಮೂಲಕ ನಿರ್ದೇಶನದಂತೆ ಕಿತ್ತೂರು, ಒಳಗೆ ಗಲ್ಲಿ ರಸ್ತೆಗೆ ಒಯ್ದರು. ಹಿಂದೆ ಬರುತ್ತಿದ್ದ ಮಾಧ್ಯಮಗಳ ವಾಹನ, ನನ್ನ ಪಿ.ಎ. ವಾಹನವನ್ನು ಬ್ಯಾರಿಕೇಡ್ ಹಾಕಿ ತಡೆದಿದ್ದರು ಎಂದು ವಿವರ ನೀಡಿದರು.

ವಾಹನ ಬ್ಲಾಕ್ ಮಾಡಲು ಹೇಳುತ್ತಿದ್ದರು. ಬಳಿಕ ಕೇಳಿದರೆ ಬೆಳಗಾವಿ ಕಡೆಗೆ ಎಂದರು. ಆಗ ಧಾರವಾಡ ಹೈಕೋರ್ಟ್ ಕಟ್ಟಡ ಕಾಣಿಸಿತ್ತು. ಕೇಳಿದರೆ ಉತ್ತರ ಸಿಗಲಿಲ್ಲ; ಅರೆಸ್ಟ್ ಕಾರಣ ಕೇಳಿ ಡೋರ್ ತೆಗೆಯಲೆತ್ನಿಸಿದೆ. ಬಲವಂತ ಮಾಡಿದ ಗುರುತುಗಳಿವೆ ಎಂದು ತಿಳಿಸಿದರು. ನಾನು ಆಗ ಪತ್ನಿಗೆ ಲೈವ್ ಲೊಕೇಶನ್ ಹಾಕಿದೆ. ಫೋನ್ ಮಾಡಿದರು. ಗಾಬರಿ ಪಡದಂತೆ ಸಮಾಧಾನ ಮಾಡಿದೆ ಎಂದರು.

ಸವದತ್ತಿ, ರಾಮದುರ್ಗ, ಯಾದವಾಡ, ಕಬ್ಬಿನ ಗದ್ದೆಗಳ ನಡುವೆ ನಿಲ್ಲಿಸಿದ್ದರು. ಹಿಂದೆ, ಮುಂದೆ ಪೊಲೀಸ್ ಜೀಪಿತ್ತು. ಆರರಿಂದ 8 ಜನ ಪೊಲೀಸರಿದ್ದರು. ಇಳಿದುಹೋಗಿ ಫೋನಿನಲ್ಲಿ ಮಾತನಾಡಿದರು. ಮಾಧ್ಯಮದವರು ಬಂದಾಗ ತಡೆದರು. ನಡೆ ನಿಗೂಢ ಎಂದು ಮಾಧ್ಯಮದವರಿಗೆ ತಿಳಿಸಿದೆ. ಇನ್ನೆಲ್ಲಿಗೋ ಕರೆದೊಯ್ದರು. ಮೂತ್ರಕ್ಕೂ ಅವಕಾಶ ಕೊಡಲಿಲ್ಲ. ಡಿವೈಎಸ್ಪಿ ಕಚೇರಿಗೆ ಕರೆದೊಯ್ದಾಗ ಅಲ್ಲಿಗೆ ಕೇಶವ ಪ್ರಸಾದ್ ಸೇರಿಕೊಂಡರು ಎಂದರು.

ಅವರು ಜೋರು ಮಾಡಿದರು. ವಾಶ್ ರೂಂ ಕೆಟ್ಟದಾಗಿತ್ತು. ಕನ್ನಡಿ ನೋಡಿದಾಗ ರಕ್ತ ಗಡ್ಡ, ಮೀಸೆಯಲ್ಲಿ ಅಂಟಿಕೊಂಡಿತ್ತು. ಪೊಲೀಸರು ಸ್ಥಳೀಯ ನರ್ಸ್ ಕರೆಸಿ ಫಸ್ಟ್ ಏಯ್ಡ್ ಮಾಡಿಸಿದರು. 11.45ರಿಂದ 3ರವರೆಗೂ ಚಿಕಿತ್ಸೆ ಕೊಡಲಿಲ್ಲ. ಕುಡಿಯಲು ನೀರಿಲ್ಲ; ವಾಶ್ ರೂಮಿಗೆ ಜಾಗ ಇಲ್ಲ. ಹಳ್ಳಿ ರಸ್ತೆ, ಗದ್ದೆ, ಕಾಡಿನ ರಸ್ತೆಯಲ್ಲಿ ಓಡಾಡಿಸುತ್ತಿದ್ದರು ಎಂದು ತಿಳಿಸಿದರು.

 
ಮಾಧ್ಯಮ ವಾಹನಕ್ಕೆ ಪೊಲೀಸ್ ವಾಹನದಿಂದ ಗುದ್ದಿಸಿ ಬ್ಲಾಕ್..
ಮಾಧ್ಯಮ ವಾಹನಕ್ಕೆ ಪೊಲೀಸ್ ವಾಹನದಿಂದ ಗುದ್ದಿಸಿ ಬ್ಲಾಕ್ ಮಾಡಿದ್ದರು. ಹಳ್ಳ, ದಿಬ್ಬವಿರುವ ನಿಗೂಢ ದಾರಿಯಲ್ಲಿ ವಾಹನ ಒಯ್ದರು. ಕೊನೆಗೆ ಅದು ನಿಂತಿದ್ದು ಸ್ಟೋನ್ ಕ್ರಷರ್ ಇದ್ದ ಜಾಗದಲ್ಲಿ. ನಾನು ಆಗ ನೀವು ನನ್ನನ್ನು ಏನೋ ಮಾಡಹೊರಟಿದ್ದೀರಿ ಎಂದು ಚೀರಾಡಿದೆ. ಮಾಧ್ಯಮದವರು ಅಲ್ಲಿಗೂ ಬೈಕ್, ಕಾರಿನಲ್ಲಿ ಬಂದರು ಎಂದು ಮಾಹಿತಿ ಕೊಟ್ಟರು.

ಕೇಶವ ಪ್ರಸಾದ್ ಒತ್ತಡಪೂರ್ವಕ ಬಂದು ನಮ್ಮ ವಾಹನ ಏರಿದರು. ಆಗಾಗ ಟೆಲಿಫೋನ್ ಕರೆ ಬರುತ್ತಿತ್ತು. ಲೆಫ್ಟ್, ರೈಟ್, ಯೂ ಟರ್ನ್ ಎಂದು ಸೂಚನೆ ಕೊಡುತ್ತಿದ್ದರು. 20ಕ್ಕೂ ಹೆಚ್ಚು ಬಾರಿ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದರು. ತಳ್ಳಾಟ, ನೂಕಾಟ ನಡೆಯಿತು. ನನ್ನ ಕುತ್ತಿಗೆ ಹಿಡಿದು ಒತ್ತಾಯದಿಂದ ಫೋನ್ ಕಿತ್ತುಕೊಳ್ಳಲೆತ್ನಿಸಿದರು. ನಾನು ಜರ್ಕಿನ್ ಜಿಪ್ ಹಾಕಿ ಫೋನ್ ಕೊಡಲಿಲ್ಲ ಎಂದರು. ಫೋನ್ ಕಿತ್ತುಕೊಳ್ಳಲಾಗೋದಿಲ್ವೇ ಎಂದು ಫೋನ್‍ನಲ್ಲಿ ಮಾತನಾಡಿದವರು ಗದರಿಸುವುದು ಕೇಳಿಸಿತ್ತು ಎಂದರು. ಯಾರೆಂದು ಕೇಳಿದರೆ ತಿಳಿಸಲಿಲ್ಲ ಎಂದು ಹೇಳಿದರು.

ರಾಮದುರ್ಗದ ಡಿವೈಎಸ್ಪಿ ಚಿದಂಬರಂ, ಬೆಳಗಾವಿ ಮಾರ್ಕೆಟ್‍ನ ಎಸಿಪಿ ಗಂಗಾಧರ್, ಕಿತ್ತೂರು ಪಿಎಸ್‍ಐ ಪ್ರವೀಣ್ ನಿರ್ದೇಶನ ಬರುತ್ತಿತ್ತು. ಹಿಂದೆ ಮುಂದೆ ಯಾರಿದ್ದರೋ ಗೊತ್ತಿಲ್ಲ ಎಂದು ತಿಳಿಸಿದರು. ಮತ್ತೆ ಕೇಶವಪ್ರಸಾದರನ್ನು ಬಲವಂತವಾಗಿ ಎಳೆದು ಹಾಕಿ, ಮಾಧ್ಯಮಗಳನ್ನು ಬ್ಯಾರಿಕೇಡ್ ಹಾಕಿ ದೂರವಿಟ್ಟು ನನ್ನೊಬ್ಬನನ್ನೇ ಕರೆದೊಯ್ದರು ಎಂದರು.

 
ತಲೆ ಚಚ್ಚಿಕೊಂಡಾಗ ರಕ್ತ ಬಂತು; ಫೋನ್ ಬಿಟ್ಟರು..
ಲೋಕಾಪುರ, ಮುಧೋಳಕ್ಕೆ ಒಯ್ಯಲಾಯಿತು. ಕುಡಿದಿದ್ದ ಧಡೂತಿ ವ್ಯಕ್ತಿ ಫೋನ್ ಕಿತ್ತುಕೊಳ್ಳಲು ಮುಂದಾದ; ಆಗ ತಲೆ ಚಚ್ಚಿಕೊಂಡು ಡೋರ್ ಒದ್ದೆ. ನೆಗೆಯುವುದಾಗಿ ತಿಳಿಸಿದೆ. ಆಗ ಮತ್ತೆ ರಕ್ತ ಬರುವ ಕಾರಣ ಫೋನ್ ಕಿತ್ತುಕೊಳ್ಳಲಿಲ್ಲ ಎಂದು ಕಾರಣ ತಿಳಿಸಿದರು. ಗದ್ದೆಯೊಳಗೆ ನಿಲ್ಲಿಸಿ ಫೋನ್ ಕೇಳಿದರು. ಕಾಲು ಹಿಡಿಯಲು ಬಂದರು. ಫೋನ್ ವಿಷಯ ಎತ್ತಿದರೆ ಹುಷಾರ್, ಅರೆಸ್ಟ್ ಮಾಡಿದ್ದೀರಾ? ಕಾರಣ ಹೇಳಿ ಎಂದೆ. ರೌದ್ರಾವತಾರ ತಾಳಿ ಹಲ್ಲು ಕಡಿದಾಗ ಭಯಗೊಂಡರು ಎಂದರು.

ಮುಧೋಳದ ಬಳಿ ಗ್ರಾಮಾಂತರ ಎಸ್ಪಿ ಭೀಮಾಶಂಕರ ಗುಳೇದ ಬಂದರು. ಪೊಲೀಸ್ ವರ್ತನೆ ಬಗ್ಗೆ ವಿವರಿಸಿದೆ. ಧಡೂತಿ ಮತ್ತೆ ಫೋನ್ ಕಿತ್ತುಕೊಳ್ಳಲು ಬಂದ. ತಳ್ಳಾಟ ನೂಕಾಟ ನಡೆಯಿತು. ಎಸ್ಪಿಗೂ ನಿರ್ದೇಶನ ಬರುತ್ತಿತ್ತು. ಮಾಧ್ಯಮ, ಇತರ ವಾಹನಗಳನ್ನು ತಪ್ಪಿಸಿ ನಿಗೂಢ ಜಾಗಕ್ಕೆ ಮುಂದೊಯ್ದರು. ಫೋಟೊ, ಟ್ವೀಟ್ ಬಗ್ಗೆ ಆಕ್ಷೇಪಿಸಿದರು. ಬಳಿಕ ಅಂಕಲಗಿ ಠಾಣೆಗೆ ಹೋದಾಗ ಬೆಳಕು ಹರಿದಿತ್ತು. ಅಲ್ಲಿ ಟಾಯ್ಲೆಟ್‍ಗೆ ಹೋದೆ. ರಾತ್ರಿ ಊಟವೂ ಇರಲಿಲ್ಲ. ಹೊಟ್ಟೆ ನೋವು ಬರುತ್ತಿತ್ತು. ಆಗ ಏನಾದರೂ ತಿನ್ನಿ ಎಂದರು. ನಾನು ನಿರಾಕರಿಸಿದೆ ಎಂದು ವಿವರಿಸಿದರು.

ಹೊಡೆದು ಸಾಯಿಸುವ ಹುನ್ನಾರ ಇತ್ತೇ...?
ಸೀಬೆಹಣ್ಣು ತರಿಸಿ ತಿಂದೆ. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರು. ಬಿಪಿ ಜಾಸ್ತಿ ಇತ್ತು. ಸ್ಕ್ಯಾನಿಂಗ್, ಎಕ್ಸ್‍ರೇ ಮಾಡಿಸಿದರು. ಎಲ್ಲ ಕಡೆ ನಿಗೂಢವಾಗಿ ಯಾಕೆ ನಡೆಸಿಕೊಂಡರು. ಕಬ್ಬಿನ ಗದ್ದೆಯಲ್ಲಿ ಯಾರನ್ನೋ ಕರೆಸಿ ಸಾಯಿಸುವ, ಗುಂಪು ಹೊಡೆದು ಸಾಯಿಸಿದೆ ಎಂದು ತಿಳಿಸುವ ಹುನ್ನಾರ ಇದರ ಹಿಂದಿತ್ತೇ ಎಂದು ಅನುಮಾನ ವ್ಯಕ್ತಪಡಿಸಿದರು. ಕೋರ್ಟಿನಲ್ಲಿ ಎಲ್ಲವನ್ನೂ ಸಂಕ್ಷಿಪ್ತವಾಗಿ ನ್ಯಾಯಾಧೀಶರ ಮುಂದಿಟ್ಟೆ ಎಂದು ತಿಳಿಸಿದರು.

ನನ್ನ ಮೇಲಿನ ಹಲ್ಲೆಗೆ ವಿಶುವಲ್ಸ್ ಇವೆ. ನಿಮ್ಮ ಆರೋಪಕ್ಕೆ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಇದೆ. ಅದು ಬಿಟ್ಟರೆ ಬೇರೇನಿಲ್ಲ. ನನ್ನ ದೂರಿನ ಎಫ್‍ಐಆರ್ ದಾಖಲಿಸಿಲ್ಲ; ಕಾನೂನು ಎಲ್ಲರಿಗೂ ಸಮಾನವಲ್ಲವೇ ಎಂದು ಪ್ರಶ್ನಿಸಿದರು. ಅಂಬೇಡ್ಕರರ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಆದರೆ, ನೀವು ಲಕ್ಷ್ಮಿ ಹೆಬ್ಬಾಳ್ಕರರಿಗೆ ಹೆಚ್ಚಿನ ಆದ್ಯತೆ, ಹಕ್ಕು ಕೊಟ್ಟಿದ್ದೀರಿ ಎಂದು ಟೀಕಿಸಿದರು. ಮಾನವ ಹಕ್ಕು ಉಲ್ಲಂಘನೆ ಆಗುವಂತೆ ನಡೆದುಕೊಂಡಿದ್ದೀರಿ ಎಂದು ಆಕ್ಷೇಪಿಸಿದರು.

ಅಧಿವೇಶನದಲ್ಲಿ ನಡೆದಿತ್ತು ಡಾ.ಅಂಬೇಡ್ಕರರ ಕುರಿತ ಚರ್ಚೆ
19ರಂದು ವಿಧಾನಪರಿಷತ್ತಿನಲ್ಲಿ ಅಧಿವೇಶನವು 10.30ಕ್ಕೆ ಆರಂಭವಾಯಿತು. ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಎಲ್ಲ ಮುಗಿದ ಬಳಿಕ ಡಾ. ಅಂಬೇಡ್ಕರರ ಭಾವಚಿತ್ರ ಹಿಡಿದುಕೊಂಡು ಅವರೂ ಬಂದಿದ್ದರು; ನಾವೂ ಬಂದಿದ್ದೆವು ಎಂದು ತಿಳಿಸಿದರು. ಡಾ. ಅಂಬೇಡ್ಕರರಿಗೆ ಕಾಂಗ್ರೆಸ್ ಹೇಗೆ ಅಪಮಾನ ಮಾಡಿತ್ತು ಎಂಬುದನ್ನು ನಾವು ಎಳೆಎಳೆಯಾಗಿ ಬಿಡಿಸಿಟ್ಟೆವು ಎಂದು ಹೇಳಿದರು.

ಮಾನ್ಯ ಬಾಬಾಸಾಹೇಬ ಅವರನ್ನು 2 ಬಾರಿ ಸೋಲಿಸಿದ್ದು, ಬದುಕಿದ್ದಾಗಲೂ ಅಪಮಾನ ಮಾಡಿದ್ದು, ಸತ್ತಾಗಲೂ ಅವಮಾನ ಮಾಡಿದ ಸಂಗತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟೆವು. ಒಮ್ಮೆ ಸದನ ಮುಂದೂಡಿದರು. ಅವರೂ- ನಾವೂ ಘೋಷಣೆ ಕೂಗುತ್ತಿದ್ದೆವು. 2ನೇ ಬಾರಿ ಮತ್ತೆ ಸಭೆ ಸೇರಿದಾಗ ಅದೇ ಪುನರಾವರ್ತನೆ ಆಯಿತು. ಆಗಲೂ ಕೂಡ ಸದನ ಮುಂದೂಡಲಾಯಿತು ಎಂದು ತಿಳಿಸಿದರು.

ನಂತರ ಅಂಬೇಡ್ಕರರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯನ್ನು ತಿಳಿಸಲು ಸುವರ್ಣಸೌಧದ ಪಶ್ಚಿಮ ದ್ವಾರದಲ್ಲಿ ಹೊರಗೆ ಮಾಧ್ಯಮ ಗೋಷ್ಠಿಗೆ ಬಂದೆ. ಮಾಧ್ಯಮ ಗೋಷ್ಠಿ ಮುಗಿಸಿ ಹೋಗುವಾಗ ಪತ್ರಕರ್ತರಿಬ್ಬರು ಅಶ್ಲೀಲ ಪದ ಬಳಕೆ ಕುರಿತು ಆರೋಪ ಮಾಡುತ್ತಿರುವುದಾಗಿ ತಿಳಿಸಿದರು.

ಅವರು ಎದುರಿಗೆ ಸಿಕ್ಕಿದಾಗಲೂ ಗೌರವಯುತವಾಗಿ ಏನಕ್ಕ ಚೆನ್ನಾಗಿದ್ದೀರಾ? ಏನು ಲಕ್ಷ್ಮಕ್ಕ ಇವತ್ತು ವಿಶೇóಷ ಕಳೆ ಬಂದಿದೆ ಎಂದು ಆಗಾಗ ತಮಾಷೆ ಮಾಡಿದ್ದೇನೆ. ಆರೋಪಕ್ಕೆ ಸಂಬಂಧಿಸಿ ಸಭಾಪತಿಗಳು ರೂಲಿಂಗ್ ಕೊಟ್ಟಿದ್ದಾರೆ. ಮಾಧ್ಯಮಕ್ಕೂ ಹೇಳಿದ್ದು ಅದನ್ನು ವಿವರಿಸಲು ಹೋಗುವುದಿಲ್ಲ ಎಂದು ತಿಳಿಸಿದರು. ನಮ್ಮ ಮಾತುಗಳು ಅಂತರಾತ್ಮ, ಪರಮಾತ್ಮನಿಗೆ ಗೊತ್ತಾಗಿಯೇ ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.

30 ಗಂಟೆಗಳ ವಿದ್ಯಮಾನವದು. ಸಂಕ್ಷಿಪ್ತವಾಗಿ ಹೇಳುವೆ ಎಂದ ಅವರು, ಊಟ ಮಾಡಿ ಬರುವಾಗ ಕಾರಿನ ಮೇಲೆ ದಾಳಿ ನಡೆಸಲಾಯಿತು. ಮಾರ್ಷಲ್‍ಗಳು ಮತ್ತು ಸಾರ್ವಜನಿಕರು ಅವರನ್ನು ದೂರ ತಳ್ಳಿ ವಿಧಾನಸೌಧದ ಒಳಕ್ಕೆ ಕರೆದೊಯ್ದರು. ಲಾಂಜ್‍ನಲ್ಲಿ ಆರ್.ಅಶೋಕ್ ಕರೆಯುತ್ತಿದ್ದಾರೆಂದು ಚೀಟಿ ಬಂತು. ಎಂಎಲ್‍ಸಿ ಕಿಶೋರ್ ಅವರ ಜೊತೆಗೆ ಹೋಗಿ ಮಾತನಾಡಿ ಕಾರಿಡಾರಿನಿಂದ ಹೊರಕ್ಕೆ ಬರುವಾಗ 3-4 ಜನರು ಕೊಲೆ ಮಾಡುತ್ತೇವೆ; ಹೆಣ ಕಳಿಸುತ್ತೇವೆ; ಪೀಸ್ ಪೀಸ್ ಮಾಡುವುದಾಗಿ ತಿಳಿಸಿದರು. ಕಿಶೋರ್ ಮತ್ತು ಮಾರ್ಷಲ್‍ಗಳು ಗೇಟ್ ಬಂದ್ ಮಾಡಿದರು. 10 ನಿಮಿಷಕ್ಕೂ ಹೆಚ್ಚು ಕಾಲ ಗೇಟ್ ಒದೆಯುತ್ತಿದ್ದರು. ಹೆಣ ಕಳಿಸ್ತೇವೆ ಎಂದು ಕೂಗಾಡಿದರು. ಮಾರ್ಷಲ್‍ಗಳು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ನಾನು ಅಲ್ಲೇ ಧರಣಿ ಕುಳಿತೆ ಎಂದು ವಿವರಿಸಿದರು.

ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಮತ್ತಿತರರು ಜೊತೆಗಿದ್ದರು. ಬಳಿಕ ಸಭಾಪತಿಗಳು ಕರೆದಿದ್ದು ಹೋಗಿ ಹಲ್ಲೆ ಯತ್ನ ಕುರಿತು ಲಿಖಿತ ದೂರು ಕೊಟ್ಟೆವು. ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಕುರಿತು ತಿಳಿಸಿದರು. ನಾನು ಎಲ್ಲ ವಿವರ ನೀಡಿದೆ. ಸಮಜಾಯಿಷಿಯನ್ನು ಬರೆದು ಕೊಟ್ಟೆ ಎಂದರು.

ಸಭಾಪತಿ ರೂಲಿಂಗ್ ತಿಳಿಸಿದ ಬಳಿಕ ಜನಗಣಮನದ ಬಳಿಕ ಅನಿರ್ದಿಷ್ಟಾವಧಿಗೆ ಸಭೆ ಮುಂದೂಡಲಾಗಿತ್ತು. ಡಿಸಿಎಂ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರು ಇದ್ದರು. ಏಕವಚನದಲ್ಲಿ ನನ್ನನ್ನು, ಕುಟುಂಬವನ್ನು ನಿಂದಿಸಿ ನಿನ್ನ ಕಥೆ ಮುಗಿಸ್ತೀವಿ; ಬಾರೋ ಇಲ್ಲಿ ಎಂದು ತಿಳಿಸಿದರು. ಸಭಾಪತಿ ಕೊಠಡಿಗೆ ಹೋಗಿ ಅಲ್ಲಿ ನಡೆದ ವಿದ್ಯಮಾನವನ್ನು ಛಲವಾದಿ ನಾರಾಯಣಸ್ವಾಮಿಯವರ ಮೂಲಕ ಲಿಖಿತವಾಗಿ ಸಲ್ಲಿಸಿದ್ದೇವೆ ಎಂದು ವಿವರ ನೀಡಿದರು.

ಸಭಾಪತಿಗಳು ಎಡಿಜಿಪಿಯನ್ನು ಕರೆದು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಸೂಚಿಸಿದರು. ಕೆಲವರನ್ನು ಕಸ್ಟಡಿಗೆ ಪಡೆದಿದ್ದು, ಕ್ರಮ ತೆಗೆದುಕೊಳ್ಳುವುದಾಗಿ ಎಡಿಜಿಪಿ ತಿಳಿಸಿದ್ದರು. ಬಳಿಕ ಪ್ರಜಾಪ್ರಭುತ್ವದ ಕಗ್ಗೊಲೆ ವಿರುದ್ಧ ಸುವರ್ಣಸೌಧದ ಮೆಟ್ಟಿಲ ಬಳಿ 6.30ರ ಸುಮಾರಿಗೆ ಧರಣಿ ಕುಳಿತೆವು. 6.45ಕ್ಕೆ ನನ್ನನ್ನು ಪ್ರತ್ಯೇಕಿಸಿ ಪೊಲೀಸ್ ವ್ಯಾನಿಗೆ ಕರೆದೊಯ್ದರು. ಸಂಕನೂರರೂ ಆಕಸ್ಮಿಕವಾಗಿ ಒಳಗಿದ್ದರು. ಮೊದಲು ಹಿರೇಬಾಗೇವಾಡಿಗೆ ಕರೆದೊಯ್ದರು. ಬಳಿಕ ನನ್ನನ್ನು ಪ್ರತ್ಯೇಕವಾಗಿ ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ವಿವರಿಸಿದರು. ಬಂಧನದ ಕುರಿತು ತಿಳಿಸಲಿಲ್ಲ; ಆಗ ಬೆಳಗಾವಿ ಪೊಲೀಸ್ ಕಮೀಷನರ್ ಬಂದರು. ವಿಷಯ ತಿಳಿದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿಯವರು ರಾತ್ರಿ ಧಾವಿಸಿದರು. ವಕೀಲರನ್ನು ಒಳಕ್ಕೆ ಬಿಡಲೇ ಇಲ್ಲ ಎಂದು ಆಕ್ಷೇಪಿಸಿದರು.

ಕಸ್ಟಡಿಗೆ ಕಾರಣ ತಿಳಿಸಿ, ಎಫ್‍ಐಆರ್ ಕಾಪಿ ಕೊಡಬೇಕಿತ್ತು. ವಕೀಲರ ಸಂಪರ್ಕಕ್ಕೆ ಅವಕಾಶ ಕೊಡಬೇಕಾಗಿತ್ತು. ಕುಟುಂಬ ವರ್ಗಕ್ಕೂ ಮಾಹಿತಿ ನೀಡಬೇಕಿತ್ತು. ಇದ್ಯಾವುದೂ ನಡೆಯಲಿಲ್ಲ. ಪಾರದರ್ಶಕ, ಪ್ರಾಮಾಣಿಕವಾಗಿ ಸರಕಾರ ನಡೆದುಕೊಳ್ಳಲಿಲ್ಲ. ಅಶೋಕ್ ಅವರು ದಬಾಯಿಸಿದ ಬಳಿಕ ವಕೀಲರನ್ನು ಒಳಕ್ಕೆ ಬಿಟ್ಟರು ಎಂದು ವಿವರ ನೀಡಿದರು.

ಮಾಧ್ಯಮ ಸ್ನೇಹಿತರು ಹೆಜ್ಜೆಹೆಜ್ಜೆಗೂ ಬೆನ್ನಿಗೆ ನಿಂತು ಕಾಂಗ್ರೆಸ್ ಸರಕಾರದ ಹಿಡನ್ ಅಜೆಂಡವನ್ನು ಬಯಲಿಗೆಳೆದು, ಸತ್ಯ ಸಂಗತಿಯನ್ನು ಜನರಿಗೆ ಬಿತ್ತರಿಸುವ ಮೂಲಕ ಪರೋಕ್ಷವಾಗಿ ನನ್ನ ರಕ್ಷಣೆ ಮಾಡಿದ್ದೀರಿ. ಅವರಿಗೆ ಕೃತಜ್ಞತೆಗಳು. ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಸೇರಿದಂತೆ, ರಾಜ್ಯಾಧ್ಯಕ್ಷ ವಿಜಯೇಂದ್ರ, ಎರಡೂ ಸದನಗಳ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅರವಿಂದ ಬೆಲ್ಲದ, ಬಸನವಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸೋಮಣ್ಣ, ಶಾಸಕ ಮಿತ್ರ ಅಭಯ್ ಪಾಟೀಲ್ ಸೇರಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಜೊತೆಗಿದ್ದರು ಎಂದು ತಿಳಿಸಿದರು.

ವಕೀಲರ ತಂಡವು ಬೆಳಗಾವಿ- ಬೆಂಗಳೂರಿನಲ್ಲಿ ನ್ಯಾಯವನ್ನು ಎತ್ತಿ ಹಿಡಿಯಲು ಮತ್ತು ನಿಮ್ಮ ಜೊತೆ ನಾವಿದ್ದೇವೆ ಎಂಬ ದೃಢವಾದ ಸಂದೇಶ ನೀಡಿದೆÉ ಎಂದರು. ಕಷ್ಟ ಕಾಲದಲ್ಲಿ ಜೊತೆಗೆ ನಿಂತ ನಿಮ್ಮೆಲ್ಲರಿಗೂ ನಾನು ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದು ತಿಳಿಸಿದರು. ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಜೊತೆಗಿದ್ದು ಋಣ ತೀರಿಸುವ ಪ್ರಯತ್ನ ಮಾಡುವೆ ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಟಿವಿ ರಿಮೋರ್ಟ್‌ಗಾಗಿ ಗಲಾಟೆ: ಮನನೊಂದು ಬಾಲಕಿ ಆತ್ಮಹತ್ಯೆ