ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಪೋಸ್ಟ್ ಒಂದು ಈಗ ಬಿಜೆಪಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಬಗ್ಗೆ ಬಿಲ್ಲವ ಸಂದೇಶ್ ಎನ್ನುವ ವ್ಯಕ್ತಿಯ ಫೇಸ್ ಬುಕ್ ಪೋಸ್ಟ್ ನಲ್ಲಿ ಆಕ್ಷೇಪಾರ್ಹವಾಗಿ ಬರಹ ಬರೆಯಲಾಗಿದೆ. ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯ ಇವರು ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೇ ಇಂದು ಎಲ್ಲರನ್ನೂ ಅಗಲಿ ತೆರಳಿದ್ದಾರೆ. ಇವರ ಅಗಲಿಕೆಯನ್ನು ಭರಿಸುವ ಶಕ್ತಿ ಬ್ಲೂಜೆಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಶಾಸಕಿಯ ಫೋಟೋ ಹಾಕಿ ಬರಹ ಬರೆಯಲಾಗಿದೆ.
ಇದು ಬಿಜೆಪಿ ಬೆಂಬಲಿಗರು ಗಮನಕ್ಕೆ ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಮಾತುಗಳನ್ನು ಒಬ್ಬ ದಲಿತ ಸಂಘಟನೆಯ ನಾಯಕ ಜೀವಂತವಾಗಿ ಇರುವಾಗ್ಲೇ ಹೇಳಿದ್ದರೆ ಇಷ್ಟೊತ್ತಿಗೆ ಜಾತಿ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದವು. ಒಬ್ಬ ಶಾಸಕರ ಬಗ್ಗೆ ಇಷ್ಟು ಕೀಳು ಮಟ್ಟದ ಬರಹ ಬರೆಯುವ ಮನಸ್ಥಿತಿಯೇ?
ಈ ವ್ಯಕ್ತಿ ತಕ್ಷಣವೇ ತಪ್ಪು ಒಪ್ಪಿಕೊಂಡು ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದೇ ಹೋದರೆ ಕಾನೂನು ಮೂಲಕ ಮತ್ತು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ಬೆಂಬಗಲಿರುವ ಸೋಷಿಯಲ್ ಮೀಡಿಯಾ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.