ಬೆಂಗಳೂರು: ಸ್ವಾತಂತ್ರ್ಯಕ್ಕಾಗಿ ಅಸ್ತಿತ್ವಕಂಡು ಕೊಂಡಿದ್ದ ಅಂದಿನ ಕಾಂಗ್ರೆಸ್ ಅನ್ನು ರಾಜಕೀಯ ಅಧಿಕಾರಕ್ಕಾಗಿ ಅಪೋಶನ ಮಾಡಿಕೊಂಡ ಕುಟುಂಬದ ಮುಷ್ಟಿಯಲ್ಲಿರುವ ಇಂದಿನ ಕಾಂಗ್ರೆಸ್, ಇಂದು ನಡೆಸುತ್ತಿರುವ ಬೆಳಗಾವಿ ಸಮಾವೇಶದ ಶತಮಾನದ ನೆನಪು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಎಂಬುದು ದೇಶದ ಜನತೆಗೆ ತಿಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ ಪ್ರಯೋಗಿಸಿ ಮಹಾತ್ಮನನ್ನು ಸ್ಮರಿಸಲು ಹೊರಟಿರುವುದು ಮಹಾತ್ಮನ ಆತ್ಮಕ್ಕೆ ಇರಿದಂತೆ ಅಲ್ಲವೇ? ಅಖಂಡ ಭಾರತದ ಅಸ್ತಿತ್ವ ಹಾಗೂ ರಾಷ್ಟ್ರ ವಿಭಜನೆಯನ್ನು ತಡೆಯಲು ಕಡೇ ಕ್ಷಣದವರೆಗೂ ಪ್ರಯತ್ನಿಸಿದ ಗಾಂಧಿಯವರನ್ನು ಅಪಮಾನಿಸಲು ಹೊರಟಿರುವ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನದ ನೆನಪಿನ ಕಾರ್ಯಕ್ರಮ, ದೇಶಪ್ರೇಮವನ್ನು ಮೆರೆಯಲೋ, ಅಥವಾ ರಾಷ್ಟ್ರವಿದ್ರೋಹಿ ಶಕ್ತಿಗಳನ್ನು ಓಲೈಸಲೋ? ಅಥವಾ ನಿಮ್ಮ ಮಿತ್ರರಾದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಓಲೈಕೆಗೋ ಎನ್ನುವುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಬೇಕು.
ಭಾರತದ ಭೂಪಟಕ್ಕೆ ಅಪಚಾರವೆಸಗಿ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ್ರೋಹ, ಗಾಂಧಿದ್ರೋಹ ಎರಡನ್ನು ಎಸೆಗಿರುವ ಕಾಂಗ್ರೆಸಿಗರು ಈ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.