ಬೆಂಗಳೂರು: ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಈಗ ಕಾಂಗ್ರೆಸ್ ಶಾಸಕರೊಬ್ಬರು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳು ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಾಗಿವೆ. ಇದೇ ಕಾರಣಕ್ಕೇ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ ಗ್ಯಾರಂಟಿಯೇ ಸರ್ಕಾರಕ್ಕೆ ಹೊರೆಯಾಗುತ್ತಿದ್ದು ಕೈ ಶಾಸಕರಿಂದಲೇ ಈ ಬಗ್ಗೆ ಆಗಾಗ ಅಸಮಾಧಾನಗಳು ಕೇಳಿಬರುತ್ತಿರುತ್ತವೆ.
ಉಪಚುನಾವಣೆ ಸಂದರ್ಭದಲ್ಲಿ ನಮ್ಮ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ ಎಂದು ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದ ಕಾಂಗ್ರೆಸ್ ಶಾಸಕ ಗವಿಯಪ್ಪ ಈಗ ಗ್ಯಾರಂಟಿ ಯೋಜನೆ ಕೈ ಬಿಡುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದು, ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಗ್ಯಾರಂಟಿ ಯೋಜನೆಗಳ ಪೈಕಿ ಕೆಲವನ್ನಾದರೂ ಕೈ ಬಿಡಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.
ಗ್ಯಾರಂಟಿಯಿಂದಾಗಿ ಆಶ್ರಯ ಮನೆಗಳು ಬರುತ್ತಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆ ಪೈಕಿ ಶಕ್ತಿ ಯೋಜನೆಯನ್ನಾದರೂ ಕೈ ಬಿಡುವಂತೆ ಸಿಎಂಗೆ ಮನವಿ ಮಾಡುವುದಾಗಿ ಗವಿಯಪ್ಪ ಹೇಳಿದ್ದಾರೆ. ಈ ಮೊದಲು ಅನುದಾನ ಬರುತ್ತಿಲ್ಲ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದ ಗವಿಯಪ್ಪ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.