ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಯಡಿಯೂರಪ್ಪ ಈ ರೀತಿ ಹಲವಾರು ಬಾರಿ ಸುಳ್ಳು ಹೇಳಿದ್ದಾರೆ. ಅವರದ್ದು ಇದೊಂದು ಕಾರ್ಯ ತಂತ್ರ ಅಷ್ಟೇ. ಕೇವಲ ರಾಜ್ಯ ರಾಜಕೀಯದಲ್ಲಿ ಗೊಂದಲ ಸೃಷ್ಟಿಸುವುದು ಬಿಜೆಪಿಯ ಹುನ್ನಾರವಾಗಿದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಮ್ಮ ಪಕ್ಷದಲ್ಲಿ ಇಲ್ಲ. ಅವರನ್ನು ಸೆಳೆದರೆಷ್ಟು ಬಿಟ್ಟರೆಷ್ಟು. ನಾವು ಈ ಬಗ್ಗೆ ಹೇಳಲ್ಲ ಬಿಜೆಪಿಯವರೇ ಹೇಳಬೇಕು ಎಂದು ಕಿಚಾಯಿಸಿದರು.
ಯಡಿಯೂರಪ್ಪರಿಗೆ ರಾಜ್ಯದ ಜನತೆ ಅಧಿಕಾರ ಕೊಟ್ಟಾಗ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಸಂಪುಟದ ಅನೇಕ ಮುಖಂಡರು ಭ್ರಷ್ಟಾಚಾರ, ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನು ಜನತೆ ಮರೆತಿಲ್ಲ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಮೊದಲು ಬಿಜೆಪಿಯಲ್ಲಿರುವ ಅಂತರಿಕ ಭಿನ್ನಮತ ಶಮನದತ್ತ ಗಮನ ಕೊಡಲಿ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವ ಅವರ ಕಾರ್ಯತಂತ್ರ ಸಂಪೂರ್ಣವಾಗಿ ವಿಫಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ