ಹಾಜರಾತಿ ಕೊರತೆ ಇದ್ದುದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ತನ್ನ ಕಾಲೇಜು ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದಿದೆ.
ಮೂರನೇ ವರ್ಷ ಬಿಬಿಎಂ ಓದುತ್ತಿರುವ ಮೊಹಮ್ಮದ್ ಶಹನವಾಜ್ ಎಂಬ ವಿದ್ಯಾರ್ಥಿ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಹೀಗಾಗಿ ಕಾಲೇಜಿನ ಪ್ರಾಚಾರ್ಯರಾದ ಫಾದರ್. ಮೈಕಲ್ ಸಾಂತುಮಾಯರ್ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು. ಇದರಿಂದ ಕೋಪಗೊಂಡ ಶಹನವಾಜ್ ತನ್ನ ಗುರುಗಳ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಗಾಯಗೊಂಡಿರುವ ಪ್ರಾಚಾರ್ಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯನ್ನು ಖಂಡಿಸಿರುವ ಕ್ಯಾಥೋಲಿಕ್ ಸಭಾ ಮೂರು ದಿನಗಳೊಳಗೆ ಆರೋಪಿ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ದಕ್ಷಿಣ ಕನ್ನಡ. ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕ್ರೈಸ್ತ ವಿದ್ಯಾಸಂಸ್ಥೆಗಳನ್ನು ಮುಚ್ಚಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಹಲ್ಲೆಯಿಂದ ಕರಾವಳಿ ಶಿಕ್ಷಕರು ಆತಂಕಕ್ಕೊಳಗಾಗಿದ್ದಾರೆ. ವಿದ್ಯಾರ್ಥಿಗಳ ತಪ್ಪಿಗೆ ಬೈದರೆ ಸಾಕು ಬೋಧಕರ ಮೇಲೆ ಆರೋಪ ಕೇಳಿ ಬರುತ್ತದೆ, ಪ್ರಕರಣ ದಾಖಲಾಗುತ್ತದೆ. ಆದರೆ ಶಿಕ್ಷಕರಿಗೆ ಸೂಕ್ತ ರಕ್ಷಣೆ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕ್ಯಾಥೋಲಿಕ್ ಸಭಾ ಅಧ್ಯಕ್ಷ ಅನಿಲ್ ಲೋಬೋ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ