ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಹಿಯಿರುವ ನಕಲಿ ಶಿಫಾರಸ್ಸು ಪತ್ರ ಸೃಷ್ಟಿಸಿದ ಕಾರ್ಯಕರ್ತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಿರ್ಧರಿಸಿದ್ದಾರೆ.
ಬೆಳಗಾವಿಯ ಸಂತೋಷ್.ಕೆ.ಪಾಟೀಲ್ ಎನ್ನುವ ಕಾರ್ಯಕರ್ತನೊಬ್ಬ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ರಾಹುಲ್ ಗಾಂಧಿ ಸಹಿಯಿರುವ ನಕಲಿ ಪತ್ರ ಕಳುಹಿಸಿಕೊಟ್ಟಿದ್ದ. ಪತ್ರದಲ್ಲಿ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಶಿಫಾರಸ್ಸು ಮಾಡಲಾಗಿತ್ತು.
ಪತ್ರದ ನೈಜತೆಯ ಬಗ್ಗೆ ಅನುಮಾನಗೊಂಡ ಪರಮೇಶ್ವರ್ ಪರಿಶೀಲನೆ ನಡೆಸಿದಾಗ ಶಿಫಾರಸ್ಸು ನಕಲಿ ಪತ್ರ ಎನ್ನುವುದು ಬಹಿರಂಗವಾಗಿದೆ.
ಹಲವು ದಶಕಗಳ ರಾಜಕೀಯ ಅನುಭವವಿರುವ ಜಿ.ಪರಮೇಶ್ವರ್‌ಗೆ ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ಪಾಟೀಲ್‌ನ ಪತ್ರ ನಕಲಿಯಾಗಿದೆ ಎನ್ನುವದು ಖಚಿತವಾಗುತ್ತಿದ್ದಂತೆ ದೆಹಲಿಗೆ ಕರೆ ಮಾಡಿ ಪತ್ರದ ಬಗ್ಗೆ ಮಾಹಿತಿ ಕೇಳಿದ್ದಾರೆ. ಆದರೆ, ಯಾವುದೇ ಶಿಫಾರಸ್ಸು ಪತ್ರ ದೆಹಲಿಯಿಂದ ರಾಹುಲ್ ಗಾಂಧಿ ರವಾನಿಸಿಲ್ಲ ಎನ್ನುವುದು ಖಚಿತವಾಗಿದೆ.
ಆರೋಪಿ ಸಂತೋಷ್ ಪಾಟೀಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೆಪಿಸಿಸಿ ಅಂತಿಮ ತೀರ್ಮಾನ ತೆಗೆದುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ