ಶಿಗ್ಗಾಂವಿ: ಮುಂಬರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರನಿಗಾಗಿ ಕಾಂಗ್ರೆಸ್ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡಿತೇ ಎಂಬ ಅನುಮಾನ ಮೂಡಿದೆ.
ಶಿಗ್ಗಾಂವಿಯಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ ನಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿ ಮೊದಲು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿತು. ಬಸವರಾಜ ಬೊಮ್ಮಾಯಿಂದ ತೆರವಾದ ಸ್ಥಾನಕ್ಕೆ ಪುತ್ರನನ್ನೇ ಕಣಕ್ಕಿಳಿಸಲಾಯಿತು.
ಇತ್ತ ಬೊಮ್ಮಾಯಿ ಪುತ್ರನನ್ನು ಕಣಕ್ಕಿಳಿಸುತ್ತಿದ್ದಂತೇ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಯಾಸಿರ್ ಪಠಾಣ್ ರನ್ನು ಕಣಕ್ಕಿಳಿಸಿದೆ. ಆದರೆ ಯಾಸಿರ್ ಸ್ಥಳೀಯರಲ್ಲ. ಅಲ್ಲದೆ ಅವರು ಪರಿಚಿತರೂ ಅಲ್ಲ. ಬಸವರಾಜ ಬೊಮ್ಮಾಯಿ ಪುತ್ರನ ವಿರುದ್ಧ ಒಬ್ಬ ದುರ್ಬಲ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ ಎಂದೇ ಅಂದುಕೊಳ್ಳಬಹುದು.
ಇದನ್ನು ಗಮನಿಸಿರುವ ಜನರು, ಕಾಂಗ್ರೆಸ್ ಇಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿತೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಯಾಕೆಂದರೆ ಯಾಸಿರ್ ನಾಮಪತ್ರ ಸಲ್ಲಿಕೆ ವೇಳೆಯೂ ಯಾವೊಬ್ಬ ಕಾಂಗ್ರೆಸ್ ನಾಯಕರೂ ಜೊತೆಗಿರಲಿಲ್ಲ. ಹೀಗಾಗಿ ಶಿಗ್ಗಾಂವಿಯನ್ನು ಬೇಕೆಂದೇ ಕಡೆಗಣಿಸಿ ಬೊಮ್ಮಾಯಿ ಪುತ್ರನಿಗೆ ಕಾಂಗ್ರೆಸ್ ಅನುಕೂಲ ಮಾಡಿಕೊಡುತ್ತಿದೆಯೇ ಎಂಬ ಅನುಮಾನ ಮೂಡಿದೆ.