ಬೆಂಗಳೂರು: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು 'ಕರಿಯಾ' ಎಂದು ಜನಾಂಗೀಯ ನಿಂದನೆ ಮಾಡಿದ ಸಚಿವ ಜಮೀರ್ ಅಹ್ಮದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಸೋಮವಾರ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷಯ ಗಂಭೀರವಾಗಿದ್ದರೆ ಸಮಿತಿಯು ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು ಎಂದರು..
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಎಸ್ ಯೋಗೇಶ್ವರ್ ಪರ ಪ್ರಚಾರ ಮಾಡುವ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ಜಮೀರ್ ಅಹ್ಮದ್ ಹೇಳುವ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಲ್ಲದೆ ಜಮೀರ್ ನಡವಳಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಕೂಡಾ ಅಸಮಾಧಾನ ಹೊರಹಾಕಿದ್ದರು.
ಇದೀಗ ಹಲವು ಕಾಂಗ್ರೆಸ್ ಪದಾಧಿಕಾರಿಗಳು, ಪಕ್ಷಕ್ಕೆ ಹಾನಿ ಮಾಡಿದ ಮತ್ತು ಮುಜುಗರ ಉಂಟು ಮಾಡಿದ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಕ್ಷವನ್ನು ಒತ್ತಾಯಿಸುತ್ತಿದ್ದಾರೆ.
"ನಮ್ಮ ರಾಜ್ಯ ಕಾಂಗ್ರೆಸ್ ಅಧ್ಯಕ್ಷ(ಡಿ ಕೆ ಶಿವಕುಮಾರ್)ರು, ಉಪಚುನಾವಣೆಯ ನಂತರ, ಅವರ (ಖಾನ್) ಹೇಳಿಕೆ ಚುನಾವಣೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಪಕ್ಷದಲ್ಲಿ ರಹಮಾನ್ ಖಾನ್ ನೇತೃತ್ವದಲ್ಲಿ ಶಿಸ್ತು ಸಮಿತಿಯಿದೆ. ಪಕ್ಷದ ಅಧ್ಯಕ್ಷರು ಈ ಕುರಿತು ಕ್ರಮಕ್ಕೆ ಶಿಸ್ತು ಸಮಿತಿಗೆ ಸೂಚಿಸಿದರೆ, ಅವರು ಖಾನ್ ಅವರನ್ನು ಕರೆದು ವಿಚಾರಿಸಬಹುದು” ಎಂದು ಪರಮೇಶ್ವರ ಅವರು ಹೇಳಿದ್ದಾರೆ.