ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬಿಪಿಎಲ್ ಕಾರ್ಡ್‌ಗಳ ರದ್ದು ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ರದ್ದು ಮಾಡಲಾಗುವುದು ಎಂದು ಸ್ಪಷ್ಪನೆ ನೀಡಿದರು.
ಶಾಸಕರ ಭವನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅರ್ಹ ಬಡವರಿಗೆ ಕಾರ್ಡ್ ತಪ್ಪಿಸುವುದಿಲ್ಲ. ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ರದ್ದು ಮಾಡಲಾಗುವುದು. ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಅಲ್ಲ ಎಂದರು.
2017ರಲ್ಲಿ 1 ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿಯವರು ಮಾಡಿಲ್ಲ. ಆದರೆ ಇದೀಗ ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿ ಇಂತಹ ಯಾವ ಯೋಜನೆ ಜಾರಿಯಾಗಿದೆ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸರ್ಕಾರ ಕೇವಲ ಗ್ಯಾರಂಟಿ ಎನ್ನುತ್ತಿದೆ, ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರು ಇರುವಾಗ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದರೆ? ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ?. ನಾವು ರಾಜ್ಯದಿಂದ ಕೇಂದ್ರಕ್ಕೆ ₹4.50 ಲಕ್ಷ ಕೋಟಿ ತೆರಿಗೆಯನ್ನು ಕಟ್ಟುತ್ತೇವೆ. ನಮಗೆ ವಾಪಸ್ಸು ಬರುವುದು ₹59 ಸಾವಿರ ಕೋಟಿ ಮಾತ್ರ. ಉಳಿದ ಹಣ ಕೇಂದ್ರದಲ್ಲಿಯೇ ಇದೆ. ಸುಮ್ಮನೆ ಮಾತನಾಡುವುದನ್ನು ಬಿಟ್ಟು ಆ ದುಡ್ಡನ್ನು ರಾಜ್ಯಕ್ಕೆ ಕೊಡಿಸಲಿ ಎಂದರು.<>