Publish Date: Mon, 17 Apr 2023 (14:31 IST)
Updated Date: Mon, 17 Apr 2023 (14:33 IST)
ಬೆಂಗಳೂರು : ಕಾಂಗ್ರೆಸ್ನ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ. ಚುನಾವಣೆ ಮುಗಿಯುವವರೆಗೆ ಬಿಜೆಪಿಯಿಂದ ಹೋದವರಿಗೆ ಸನ್ಮಾನ ಮಾಡುತ್ತಾರೆ. ಚುನಾವಣೆ ಮುಗಿದ ಮೇಲೆ ಅವರಿಗೆ ಅವಮಾನ ಮಾಡುವುದು ಕಾಂಗ್ರೆಸ್ನ ಸಂಸ್ಕೃತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.
ಪ್ಲಾನ್ ಮಾಡಿ ನನ್ನನ್ನು ಬಿಜೆಪಿಯಿಂದ ಹೊರದಬ್ಬಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರು ಒಂದು ಕಾರಣ ಕೊಡಬೇಕು. ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಸ್ಥಾನಮಾನಗಳನ್ನು ಕೊಡುವುದರ ಜೊತೆಗೆ ಅವರನ್ನು ಅತ್ಯಂತ ಗೌರವಯುತವಾಗಿ ಕಂಡಿದೆ. ಇದರಲ್ಲಿ ಎರಡನೇ ಮಾತಿಲ್ಲ.
ಕಳೆದ 25 ವರ್ಷದ ಅವರ ಬೆಳವಣಿಗೆಯಲ್ಲಿ ಬಿಜೆಪಿಯೇ ಪ್ರಮುಖವಾದ ಪಾತ್ರವನ್ನು ವಹಿಸಿದೆ. 25 ವರ್ಷ ಅವರನ್ನು ಬೆಳೆಸಿದ ಬಿಜೆಪಿ ಈಗ ಅವರನ್ನು ಕೆಳಗಿಳಿಸುವ ಪ್ರಯತ್ನವನ್ನು ಮಾಡಿಲ್ಲ. ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಪಕ್ಷದ ವರಿಷ್ಠರಿಗೂ ಕೂಡಾ ಇದರ ಬಗ್ಗೆ ಮಾಹಿತಿಯಿದೆ. ಪ್ರಮುಖ ನಾಯಕರಲ್ಲಿ ಶೆಟ್ಟರ್ ಕೂಡಾ ಒಬ್ಬರಾಗಿದ್ದರು. ಹೀಗಾಗಿ ಇದರಲ್ಲಿ ಷಡ್ಯಂತ್ರವಿದೆ ಅಥವಾ ಕೇಂದ್ರೀಕೃತವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಹೋಗುವಾಗ ಒಂದು ನೆಪ ಹೇಳಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.