Select Your Language

Notifications

webdunia
webdunia
webdunia
webdunia

ವಾಲ್ಮೀಕಿ ಹಗರಣವೂ ಇಲ್ಲ ಏನೂ ಅಲ್ಲ, ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ಇಡಿ ಅಸ್ತ್ರ ಬಳಸುತ್ತಿದೆ ಎಂದ ಕಾಂಗ್ರೆಸ್

Karnataka BJP Protest

Krishnaveni K

ಬೆಂಗಳೂರು , ಶುಕ್ರವಾರ, 19 ಜುಲೈ 2024 (10:17 IST)
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಈಗ ತಿರುಗೇಟು ನೀಡಿದೆ. ಹಗರಣ ನೆಪದಲ್ಲಿ ಇಡಿ ಬಳಸಿ ನಮ್ಮ ಸರ್ಕಾರವನ್ನೇ ಬೀಳಿಸಲು ಬಿಜೆಪಿ ತಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಕಳೆದ ಮೂರು ದಿನಗಳಿಂದ ಸದನದಲ್ಲಿ ವಾಲ್ಮೀಕಿ ಹಗರಣದ ವಿಚಾರವಾಗಿ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಈ ಹಗರಣ ಸರ್ಕಾರಕ್ಕೆ ಮುಜುಗರ ತಂದಿದೆ. ಇದರ ನಡುವೆ ಈಗ ಬಿಜೆಪಿ ವಿರುದ್ಧವೇ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಪ್ರಕರಣದಲ್ಲಿ ಎಸ್ ಐಟಿ ತನಿಖೆ ನಡೆಯುತ್ತಿದ್ದರೂ ಕೇಂದ್ರ ತನಿಖಾ ಸಂಸ್ಥೆ ಇಡಿ ಮಧ್ಯಪ್ರವೇಶಿಸಿರುವುದು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಎಂದು ದೂರಿದೆ.

ಈ ಬಗ್ಗೆ ಜನಾಂದೋಲನ ಕೈಗೊಳ್ಳುವುದಾಗಿಯೂ ಕಾಂಗ್ರೆಸ್ ಪ್ರತಿದಾಳಿ ನಡೆಸಿದೆ. ವಾಲ್ಮೀಕಿ ಹಗರಣದಲ್ಲಿ ಸಿಎಂ, ಡಿಸಿಎಂ ಹೆಸರು ಹೇಳುವಂತೆ ಆರೋಪಿಗಳ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಇಡೀ ಸರ್ಕಾರವೇ ಹಗರಣದಲ್ಲಿ ಭಾಗಿಯಾಗಿದೆ ಎಂದು ಬಿಂಬಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವರಾದ ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಮುಂತಾದವರು ಗಂಭೀರ ಆರೋಪ ಮಾಡಿದ್ದಾರೆ.

ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದು ಗಂಭೀರ ಅಪರಾಧವಾಗಿದೆ. ಅಗತ್ಯ ಬಿದ್ದರೆ ಜನಾಂದೋಲನ ಮಾಡಲು ಸಿದ್ಧ ಎಂದಿದ್ದಾರೆ. ವಾಲ್ಮೀಕಿ ಹಗರಣದ ಬಗ್ಗೆ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಈ ರೀತಿ ಪ್ರತಿತಂತ್ರ ಹೆಣೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಟಿ ಮಾಲ್ ಬಂದ್: ಇದಪ್ಪಾ ರೈತರ ತಾಕತ್ತು