ಬೆಂಗಳೂರು: ಸಂಗೊಳ್ಳಿ ರಾಯಣ್ಣನಿಗೆ ಮತ್ತು ಸಿದ್ದರಾಮಯ್ಯನವರಿಗೆ ಎತ್ತಣದೆತ್ತಣ ಸಂಬಂಧ; ಸಂಗೊಳ್ಳಿ ರಾಯಣ್ಣನ ಹೆಸರು ಹೇಳಲೂ ಸಿದ್ದರಾಮಯ್ಯನವರಿಗೆ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಒಬ್ಬ ಮಹಾನ್ ಸೈನಿಕ. ನಮ್ಮ ರಾಜ್ಯದ ಉಳಿವಿಗಾಗಿ, ಕಿತ್ತೂರು ಕರ್ನಾಟಕದ ಉಳಿವಿಗೆ, ಕಿತ್ತೂರು ರಾಣಿ ಚನ್ನಮ್ಮನ ದಂಡನಾಯಕನಾಗಿ ಕೆಲಸ ಮಾಡಿದ್ದವರು. ಸಂಗೊಳ್ಳಿ ರಾಯಣ್ಣ 14 ನಿವೇಶನ ಪಡೆದಿರಲಿಲ್ಲ. 3 ಎಕರೆ 16 ಗುಂಟೆ ಜಮೀನು ತೆಗೆದುಕೊಂಡಿಲ್ಲ. ಏನೇನೂ ಆಸೆ ಇಲ್ಲದೆ, ಸ್ವಾರ್ಥ ಇಲ್ಲದೆ ರಾಜ್ಯಕ್ಕೋಸ್ಕರ ನಿಸ್ವಾರ್ಥ ಹೋರಾಟ ಮಾಡಿ ಬಲಿದಾನ ಮಾಡಿ, ನಾಡಿಗೆ ಕೀರ್ತಿ ತಂದ ವ್ಯಕ್ತಿ ಸಂಗೊಳ್ಳಿ ರಾಯಣ್ಣ ಎಂದು ವಿಶ್ಲೇಷಿಸಿದರು. ಸಿದ್ದರಾಮಯ್ಯನವರು ತಮ್ಮ ಹೇಳಿಕೆ ಸಂಬಂಧ ನಾಡಿನ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯರಂತೆ ಸಂಗೊಳ್ಳಿ ರಾಯಣ್ಣ ಹತ್ತಾರು ಸೈಟ್ ಪಡೆದಿರಲಿಲ್ಲ. ಒಂದೆಕರೆ ಜಮೀನನ್ನೂ ತೆಗೆದುಕೊಂಡಿಲ್ಲ. ಸಂಗೊಳ್ಳಿ ರಾಯಣ್ಣನ ವಂಶಸ್ಥರು ಇದ್ದರೆ ಅವರು ಬಲಿದಾನಕ್ಕಾಗಿ ನೀವೇನಾದರೂ ಕೊಡಿ ಎಂದು ಸರಕಾರಕ್ಕೆ ಮನವಿಯನ್ನೇನೂ ಕೊಟ್ಟವರಲ್ಲ. ಆದ್ದರಿಂದ ಸಂಗೊಳ್ಳಿ ರಾಯಣ್ಣನ ಹೆಸರು ಹೇಳಲೂ ಸಿದ್ದರಾಮಯ್ಯನವರಿಗೆ ನೈತಿಕತೆ ಇಲ್ಲ ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನ ಕುರಿತು ಮಾತನಾಡಿದ್ದಾರೆ. ಸಂಗೊಳ್ಳಿ ರಾಯಣ್ಣನಿಗೆ ದ್ರೋಹ ಆದ ಮಾದರಿಯಲ್ಲೇ ತಮಗೂ ದ್ರೋಹ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರನ್ನು ಬಲಿ ಕೊಡುವವರು ಯಾರು? ಅವರ ಹೆಸರು ಏನು? ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಹಿಂದೆ ಬ್ರಿಟಿಷರ ಬಳಿ ಏನೋ ತೆಗೆದುಕೊಂಡು ಸಂಗೊಳ್ಳಿ ರಾಯಣ್ಣನನ್ನು ಹಿಡಿದು ಕೊಟ್ಟಿರಬಹುದು. ನಿಮ್ಮನ್ನು ಯಾರು ಬಲಿ ಕೊಡುತ್ತಿದ್ದಾರೆ? ನಿಮ್ಮನ್ನು ಯಾರು ಹಿಡಿದು ಕೊಡುತ್ತಿದ್ದಾರೆ? ಅವರ ಹೆಸರು ತಿಳಿಸಿ ಎಂದು ಆಗ್ರಹಿಸಿದರು. ಸಿಎಂ ಆಕಾಂಕ್ಷಿಗಳು ನಿಮ್ಮನ್ನು ಬಲಿ ಕೊಡುತ್ತಿದ್ದಾರಾ? ಯಾರು ನಿಮಗೆ ದ್ರೋಹ ಮಾಡುತ್ತಿದ್ದಾರೆ? ಎಂದು ಕೇಳಿದರು.
ಗಣಪತಿಯನ್ನು ಬಂಧಿಸಿ, ಪೊಲೀಸ್ ಠಾಣೆಯಲ್ಲಿಟ್ಟ ಹಿಂದೂದ್ರೋಹಿ ಮುಖ್ಯಮಂತ್ರಿ
ನಾಗಮಂಗಲದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ಆಗಿದೆ. ಗಣಪತಿಯನ್ನು ಬಂಧಿಸಿ, ಪೊಲೀಸ್ ಠಾಣೆಯಲ್ಲಿ ಇಟ್ಟಿರುವ ಹಿಂದೂದ್ರೋಹಿ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಎಂದು ಟೀಕಿಸಿದರು.
ಬಿಜೆಪಿ ವತಿಯಿಂದ ಡಾ.ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ನಾಗಮಂಗಲಕ್ಕೆ ಭೇಟಿ ಕೊಟ್ಟಿದೆ. ಭಯೋತ್ಪಾದಕರಿಗೆ ಬೆಂಬಲ ನೀಡುವ- ಗಣಪತಿ ಮೆರವಣಿಗೆ ವಿರೋಧಿಸುವ ಎಸ್‍ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ಹೋಗಿದೆ. ಹಿಂದೂಗಳು ಅನ್ಯಾಯ ಮಾಡಿದ್ದಾಗಿ, ಹಿಂದೂಗಳೇ ಕಲ್ಲೆಸೆದುದಾಗಿ, ಚಪ್ಪಲಿ ಎಸೆದುದಾಗಿ ವರದಿ ಕೊಡಬಹುದು ಎಂದು ವಿಶ್ಲೇಷಿಸಿದರು. ಈ ಗಲಾಟೆಗೆ, ದೊಂಬಿಗೆ ಮುಸ್ಲಿಮರು ಕಾರಣರಲ್ಲ ಎಂದು ವರದಿ ಕೊಡಬಹುದು ಎಂದು ನುಡಿದರು.
ಸಿದ್ದರಾಮಯ್ಯನವರೇ, ನಿಮ್ಮ ಆಡಳಿತದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿದ್ದಾರೆ. ಪ್ಯಾಲೆಸ್ಟೀನ್ ಧ್ವಜವನ್ನು ಹಾರಿಸಿದವರು ನಿಮ್ಮ ಆಡಳಿತದಲ್ಲಿದ್ದಾರೆ. ನಿಮ್ಮ ಆಡಳಿತದಲ್ಲಿ ಗಣಪತಿಯನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಇಡುವವರಿದ್ದಾರೆ. ನಿಮ್ಮ ಆಡಳಿತದಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ಆಗಿದೆ. ಕುಕ್ಕರ್ ಬ್ಲಾಸ್ಟ್ ಮಾಡಿದವರು ಬ್ರದರ್ಸ್ ಎಂಬುದು ನಿಮ್ಮ ಪಾಲಿಸಿ ಎಂದು ಟೀಕಿಸಿದರು. ಇದೆಲ್ಲ ಕಾರಣಗಳಿಂದ ಕರ್ನಾಟಕದಲ್ಲಿ ಸುರಕ್ಷತೆ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಎಂದು ಆರೋಪಿಸಿದರು.