Publish Date: Thu, 20 Jun 2019 (15:26 IST)
Updated Date: Thu, 20 Jun 2019 (15:27 IST)
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೂನ್ 22 ರಂದು ನಡೆಸಲಿರುವ ಗ್ರಾಮ ವಾಸ್ತವ್ಯ ಯಶಸ್ವಿಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ.
ಕಲಬುರಗಿ ತಾಲೂಕಿನ ಹೇರೂರ (ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಇಲಾಖಾವಾರು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮ ಮುಖ್ಯಮಂತ್ರಿಗಳ ಪ್ರಿಯವಾದ ಕಾರ್ಯಕ್ರಮವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನಿಟ್ಟಿನಲ್ಲಿ ಇದೊಂದು ಮಹತ್ವದ್ದಾಗಿದೆ. ಸುಮಾರು 8-10 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಮಳೆ ಬಂದರೂ, ಯಾವುದೇ ತೊಂದರೆಯಾಗದಂತೆ ಜನತಾ ದರ್ಶನ ನಡೆಯುವ ಕಾರ್ಯಕ್ರಮ ಸ್ಥಳವನ್ನು ವಾಟರ್ ಪ್ರೂಪ್ ವ್ಯವಸ್ಥೆಯಿಂದ ನಿರ್ಮಿಸಲಾಗಿದೆ. ಅರ್ಜಿದಾರರು ಬಿಸಿಲಿನಿಂದ ಪರಿತಪಿಸದಂತೆ ಪಕ್ಕದಲ್ಲೇ ವಿಶಾಲವಾದ ಶಾಮಿಯಾನ ಕೂಡ ಹಾಕಲಾಗಿದೆ ಎಂದರು.