ಬೆಂಗಳೂರು: ಮೊನ್ನೆಯಷ್ಟೇ ಕೇಂದ್ರದ ಜತೆ ಮೈತ್ರಿ ಮುರಿದುಕೊಂಡಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕಡೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸ್ನೇಹದ ಹಸ್ತ ಚಾಚಿದ್ದಾರೆ.
ಮೊನ್ನೆಯಷ್ಟೇ ಮೋದಿ ಸರ್ಕಾರ ಹಣಕಾಸು ನೀತಿ ವಿರೋಧಿಸೋಣ ಎಂದಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಚಂದ್ರಬಾಬು ನಾಯ್ಡು ಅವರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರವಿಟ್ಟುಕೊಂಡು ಬೆಂಬಲಿಸಿದ್ದಾರೆ.
ಅಮಿತ್ ಶಾ ಪತ್ರದ ಬಗ್ಗೆ ಚಂದ್ರಬಾಬು ನಾಯ್ಡು ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಅಮಿತ್ ಶಾಗೆ ಸಂವಿಧಾನ ಮತ್ತು ತೆರಿಗೆ ಹಂಚಿಕೆ ವಿಷಯದ ಬಗ್ಗೆ ತಿಳುವಳಿಕೆಯೇ ಇಲ್ಲ. ಕರ್ನಾಟಕಕ್ಕೆ 90 ಸಾವಿರ ಕೋಟಿ ಅನುದಾನ ಕೊಟ್ಟು, 2 ಲಕ್ಷ ಕೋಟಿ ಕೊಟ್ಟಿದ್ದೆವು ಎಂದು ಸುಳ್ಳು ಹೇಳುತ್ತಾರೆ. ಅದೂ ಸಾಲದೆಂಬಂತೆ ನಾವೇನೋ ಚ್ಯಾರಿಟಿ ಹಣ ಪಡೆದಿದ್ದೇವೆ, ನಮ್ಮ ಹಕ್ಕಿನ ಪಾಲು ಪಡೆದಿಲ್ಲವೆಂಬಂತೆ ಆಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಟೀಕಿಸಿದ್ದಾರೆ. ಈ ಮೂಲಕ ಕೇಂದ್ರದ ಜತೆ ಮುನಿಸಿಕೊಂಡಿರುವ ಚಂದ್ರಬಾಬು ನಾಯ್ಡು ಅವರಿಗೆ ತಮ್ಮ ಬೆಂಬಲವಿರುವುದಾಗಿ ಪರೋಕ್ಷವಾಗಿ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ