ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಯೂರಿಯಾ ಗೊಬ್ಬರ ಸಿಗದೇ ರೈತರು ಪ್ರತಿಭಟನೆಯ ಹಾದಿ ಹಿಡಿದಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ರೈತರು ಸಾಕಷ್ಟು ಯೂರಿಯಾ ಗೊಬ್ಬರ ಸಿಗದೇ ರೊಚ್ಚಿಗೆದ್ದಿದ್ದಾರೆ. ಒಬ್ಬರಿಗೆ ನಾಲ್ಕು ಚೀಲ ಮಾತ್ರ ಯೂರಿಯಾ ಗೊಬ್ಬರ ಎನ್ನುತ್ತಿರುವುದು ರೈತರ ಸಿಟ್ಟಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಸಿಕ್ಕಿಲ್ಲ. ಅದಕ್ಕೇ ನಮಗೆ ಸಮಸ್ಯೆಯಾಗಿದೆ ಎಂದು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದರು.
ಹೀಗಾಗಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆಪಿ ನಡ್ಡಾಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು ಯೂರಿಯಾ ಗೊಬ್ಬರ ಒದಗಿಸುವಂತೆ ಮನವಿ ಮಾಡಿದ್ದಾರೆ. ಯೂರಿಯಾ ಗೊಬ್ಬರ ಕೊರತೆಯಿಂದ ಕರ್ನಾಟಕ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಏಪ್ರಿಲ್ ನಿಂದ ಮೇವರೆಗೆ ನಮಗೆ 6.8 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ. ಆದರೆ 5.1 ಲಕ್ಷ ಮೆಟ್ರಿಕ್ ಟನ್ ಗೊಬ್ಬರವಷ್ಟೇ ಪೂರೈಕೆಯಾಗಿದೆ. ಮಳೆಗಾಲದ ಆರಂಭದಲ್ಲಿ ರೈತರಿಗೆ ಬೆಳೆ ಬೆಳೆಯಲು ಯೂರಿಯಾ ಗೊಬ್ಬರ ಸಕಾಲದಲ್ಲಿ ಸಿಗದೇ ಹೋದರೆ ತೊಂದರೆಯಾಗುತ್ತದೆ. ಹೀಗಾಗಿ ನಮ್ಮ ರೈತರ ಹಿತದೃಷ್ಟಿಯಿಂದ ಕೇಂದ್ರ ಸಚಿವ ಜೆಪಿ ನಡ್ಡಾಗೆ ಇನ್ನೂ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಒದಗಿಸುವಂತೆ ಮನವಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.