ಬೆಳಗಾವಿ, ಡಿಸೆಂಬರ್ 26: ಯಾವುದೇ ಒಳ್ಳೆಯ ಕೆಲಸವನ್ನು ವಿರೋಧಿಸುವುದೇ ಬಿಜೆಪಿಯವರ ಅಭ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಜಮ್ಮು ಕಾಶ್ಮೀರದಲ್ಲಿ ಅಪಘಾತಕ್ಕೆ ಈಡಾಗಿ ಹುತಾತ್ಮರಾದ ಯೋಧರಿಗೆ ಅಂತಿಮ ಗೌರವ ಸಲ್ಲಿಕೆಗೆ ತೆರಳುವ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಹೆಸರನ್ನು ಕೆಆರ್ ಎಸ್ ರಸ್ತೆಗೆ ಇಡುವ ಪ್ರಸ್ತಾವನೆಯನ್ನು ಬಿಜೆಪಿ ವಿರೋಧಿಸುತ್ತಿದೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಮುಡಾ ಹಗರಣದಲ್ಲಿ ಕಳಂಕಿತರಾಗಿರುವ ಸಿದ್ದರಾಮಯ್ಯ ಹೆಸರನ್ನು ಮೈಸೂರಿನ ರಸ್ತೆಗೆ ಇಡುವ ಅಗತ್ಯವೇನು ಎಂದು ಬಿಜೆಪಿ ಕಿಡಿ ಕಾರಿದೆ. ಇನ್ನಿತರ ಕೆಲವು ಸಂಘಟನೆಗಳೂ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.
ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ಹೆಸರಿಡುವ ಬಗ್ಗೆ ಬಿಜೆಪಿಯವರ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಒಳ್ಳೆಯ ಕೆಲಸವನ್ನು ವಿರೋಧಿಸುವುದೇ ಬಿಜೆಪಿಯವರ ಅಭ್ಯಾಸ. ಆದರೆ ಬಿಜೆಪಿಯವರೇ ಆದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ನಗರಪಾಲಿಕೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿಸಿದರು.