ಬೆಂಗಳೂರು: ರೈತರ ಬಗ್ಗೆ ಕಾಳಜಿ ಬಗ್ಗೆ ತಮ್ಮ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿವೈ ವಿಜಯೇಂದ್ರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ವಿಜಯೇಂದ್ರನಿಂದ ಪಾಠ ಕಲಿಯಬೇಕಾ ಎಂದು ರೋಷಾವೇಷ ತೋರಿಸಿದ್ದಾರೆ.
ರಾಜ್ಯದಲ್ಲಿ ಈಗ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಸಿಗದೇ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಇದರ ಬಗ್ಗೆ ವಿಜಯೇಂದ್ರ ರಾಜ್ಯ ಸರ್ಕಾರವನ್ನು ಟೀಕಿಸಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಯಡಿಯೂರಪ್ಪ ಸರ್ಕಾರವಿದ್ದಾಗ ಬಫರ್ ಸ್ಟಾಕ್ ಗೆ ಸಾವಿರಾರು ಕೋಟಿ ರೂ. ಮೀಸಲಿಟ್ಟಿದ್ದರು. ಆದರೆ ಈ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ರಾಜ್ಯಕ್ಕೆ ಕೊಡಬೇಕಾದಷ್ಟು ಗೊಬ್ಬರ ಕೊಡದೆ ಕೇಂದ್ರ ಸರ್ಕಾರ ರಾಜ್ಯದ ರೈತರ ವಿರೋಧಿಯಾಗಿದೆ. ನಾನು ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ವಾರ ಕಳೆದರೂ, ಬಾಕಿ ರಸಗೊಬ್ಬರ ಬಿಡುಗಡೆಯಾಗಿಲ್ಲ. ಬಿಜೆಪಿ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಕೇಂದ್ರದ ಜೊತೆ ಮಾತನಾಡಿ ಗೊಬ್ಬರ ಕೊಡಿಸಲಿ.
ವಿಜಯೇಂದ್ರನಿಂದ ನಾವು ಪಾಠ ಕಲಿಯಬೇಕಾ? ಅವರ ಅಪ್ಪ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಸಗೊಬ್ಬರ ಕೊಡಲು ಸಾಧ್ಯವಾಗದೆ, ಇಬ್ಬರು ರೈತರನ್ನು ಗೋಲಿಬಾರ್ ಮಾಡಿ ಸಾಯಿಸಿದರು. ನಮ್ಮನ್ನು ಪ್ರಶ್ನೆ ಮಾಡುವ ಇವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.