ಬೆಳಗಾವಿ: ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಪಂಚಮಸಾಲಿಗರಿಗೆ ಬೆಂಬಲ ನೀಡುವುದಾಗಿ ಹೇಳುವ ಬಿಜೆಪಿಯವರು ಟೋಪಿ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಡುವ ಶಕ್ತಿಯಿದೆ. ಆದರೆ ಬಿಜೆಪಿಯವರು ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಪಾದಿಸಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿರುವ ಬೆನ್ನಲ್ಲೇ ಸಿಎಂ ಈ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪಂಚಮಸಾಲಿಗರಿಗೆ ಟೋಪಿ ಹಾಕಿ ಹೋಗಿದ್ದಾರೆ. ಅವರು 2ಎ ಕೇಳಿದರೆ ಬಿಜೆಪಿಯವರು 2ಡಿ ಹಾಕಿ ಹೋಗಿದ್ದಾರೆ. ಹಿಂದೆ ಹೈಕೋರ್ಟ್ ಗೆ ಅಪ್ ಡೇಟ್ ಹಾಕಿದವರು ಯಾರು? ಇದೇ ಬಿಜೆಪಿಯವರು ಅಲ್ಲವೇ? ಇದೇ ಸ್ವಾಮೀಜಿಗಳು ಆಗ ಇದ್ದರಲ್ಲ. ರಸೂಲ್ ಎಂಬಾತ ಸುಪ್ರೀಂ ಕೋರ್ಟ್ ಗೆ ಹೋದರು. ಅಂದು ಅಡ್ವಕೇಟ್ ಜನರಲ್ ಆಗಿದ್ದವರು ಇದರಲ್ಲಿ ಬದಲಾವಣೆ ಮಾಡಲ್ಲ ಎಂದರು.
ಟ್ರ್ಯಾಕ್ಟರ್ ತೆಗೆದುಕೊಂಡು ಹೋರಾಟ ಮಾಡುತ್ತೀವಿ ಎಂದರು. ಶಾಂತಿಯುತ ಹೋರಾಟ ಮಾಡಿ ಎಂದರೂ ಕಾನೂನು ಕೈಗೆ ತೆಗೆದುಕೊಂಡರು. ನಾನೂ ಮೂರು ಜನ ಮಂತ್ರಿಗಳನ್ನು ಕಳುಹಿಸಿದ್ದೆ. ನಾನೇ ಎಲ್ಲಾ ಕಡೆ ಹೋಗಲು ಆಗಲ್ಲ. ಅವರನ್ನೇ ಕರೆಸಿದರೆ ಬರಲಿಲ್ಲ.ಸುವರ್ಣ ಸೌಧಕ್ಕೆ ನುಗ್ಗಲು ಪ್ರಯತ್ನಿಸಿದಾಗ ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಸಿಎಂ ಸಮರ್ಥಿಸಿದ್ದಾರೆ.