ಬೆಳಗಾವಿ: 12 ನೇ ಶತಮಾನದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ, ಮನುಷ್ಯ ಶೋಷಣೆಯ ವ್ಯವಸ್ಥೆ ಹೋಗಲಾಡಿಸಿ, ಜಾತಿ ರಹಿತ ಸಮ ಸಮಾಜ ತರಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುವರ್ಣಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರ ಅಳವಡಿಸಿದ್ದರ ಸಂಬಂಧ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಮೇಲು-ಕೀಳು ಇರುವುದು, ಮನುಷ್ಯ ತಾರತಮ್ಯ ಇರುವುದು ಧರ್ಮ ಆಗಲು ಸಾಧ್ಯವಿಲ್ಲ. ದಯೆಯೇ ಧರ್ಮದ ಮೂಲ ಎಂದು ಅವಿದ್ಯಾವಂತರಿಗೂ ಅರ್ಥ ಆಗುವಂತೆ ಧರ್ಮವನ್ನು ಬೋಧಿಸಿದರು. ಮದುವೆ ಕೂಡ ಜಾತಿ ಆಧಾರದಲ್ಲಿ ಏರ್ಪಡಿಸಲಾಗುತ್ತಿತ್ತು. ವ್ಯಕ್ತಿಯ ಯೋಗ್ಯತೆಯನ್ನು ಜಾತಿ, ವರ್ಣ ವ್ಯವಸ್ಥೆ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು. ಪ್ರತಿಭೆ ಕೂಡ ಯೋಗ್ಯತೆ ಆಧಾರದ ಮೇಲೆ ನಿರ್ಧಾರ ಆಗದೆ ಜಾತಿ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು.
ಜಾತಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಿರುವ ಪಟ್ಟ ಭದ್ರರು ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ. ಹುಟ್ಟುವಾಗ ಎಲ್ಲರೂ ವಿಶ್ವ ಮಾನವರೇ ಎಂದು ಕುವೆಂಪು ಹೇಳಿದರೆ, ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ ಎನ್ನುತ್ತಾ ಇಬ್ಬರ ಉಲ್ಲೇಖಗಳನ್ನೂ ಅವರು ಪ್ರಸ್ತಾಪಿಸಿದರು.
ಇವತ್ತಿನ ವಿಧಾನಸಭೆ, ಇವತ್ತಿನ ಪಾರ್ಲಿಮೆಂಟೇ ಅವತ್ತಿನ ಅನುಭವ ಮಂಟಪ. ಅತ್ಯಂತ ಕೆಳ ಸಮುದಾಯದ ಅಲ್ಲಮ ಪ್ರಭು ಅವರು ಅದರ ಅಧ್ಯಕ್ಷರಾಗಿದ್ದರು.
ಎಲ್ಲಾ ಜಾತಿಯ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿ ಶರಣ ಶರಣೆಯರೂ ಅನುಭವ ಮಂಟಪದ ಸದಸ್ಯರಾಗಿದ್ದರು.
ಬುದ್ದನ ಕಾಲದಲ್ಲೂ ಈ ರೀತಿಯ ಸರ್ವ ಜಾತಿ , ಸರ್ವ ಧರ್ಮದ ಪ್ರತಿನಿಧಿಗಳನ್ನು ಒಳಗೊಂಡ ಮಂಟಪಗಳಿದ್ದವು ಎಂದು ಚರಿತ್ರೆಯಲ್ಲಿ ಓದಿದ್ದೇವೆ ಎಂದರು.
ಹೀಗಾಗಿ ಅಂಬೇಡ್ಕರ್ ಅವರ ಮಾತಿನ್ನು ನಾವು ಸ್ಮರಿಸಿಕೊಳ್ಳಬೇಕು ಎನ್ನುತ್ತಾ, '" ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು" ಎನ್ನುವ ಮಾತನ್ನು ಉಲ್ಲೇಖಿಸಿದರು.
ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ಈ ನಿಷೇಧ ಬಸವಾದಿ ಶರಣರ ಕಾಲದಲ್ಲಿ ಇರಲಿಲ್ಲ ಎಂದರು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ನಮ್ಮ ಸಮಾಜ ಚಲನೆ ರಹಿತವಾಗಿದೆ ಎಂದು ಲೋಹಿಯಾ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.
ಜಾತಿ ವ್ಯವಸ್ಥೆ ಬಾವಿಯೊಳಗಿನಕಸದಂತೆ. ನೀರು ಸೇದಲು ಕೊಡ ಬಾವಿಗಿಳಿಸಿ ಕದಕಿದಾಗ ಕಸ ಪಕ್ಕಕ್ಕೆ ಸರಿಯುತ್ತದೆ. ನೀರು ಸೇದಿದ ಬಳಿಕ ಮತ್ತೆ ಕಸ ಆವರಿಸಿಕೊಳ್ಳುತ್ತದೆ. ಇದೇ ಜಾತಿ ವ್ಯವಸ್ಥೆ ಎಂದು ವಿಶ್ಲೇಷಿಸಿದರು.
850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಜಾತಿ ಮೀರಿದ ಸಾಮಾಜಿಕ ವ್ಯವಸ್ಥೆ ರೂಪಿಸಲು ಶ್ರಮಿಸಿದ್ದರು. ಅವರ ಶ್ರಮಕ್ಕೆ ಪ್ರತೀಕವಾದ ಅನುಭವ ಮಂಟಪದ ತೈಲಚಿತ್ರವನ್ನು ನಿಮ್ಮ ಅವಧಿಯಲ್ಲಿ ಅನಾವರಣಗೊಳಿಸಿದ್ದು ಒಳ್ಳೆಯದಾಯಿತು ಎಂದರು.