ಬೆಂಗಳೂರು: ಉಪಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಸಿಎಂ ಸಿದ್ದರಾಮಯ್ಯ ಈಗ ಮುಸ್ಲಿಮರಿಗೆ ಸಿವಿಲ್ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡುವ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.
ಉಪಚುನಾವಣೆ ಹೊಸ್ತಿಲಲ್ಲಿ ಮುಸ್ಲಿಮರಿಗೆ ಸರ್ಕಾರದ ಸಿವಿಲ್ ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಸಿಎಂ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಬಂದಿತ್ತು. ಇದರ ಬೆನ್ನಲ್ಲೇ ವಿಪಕ್ಷ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮತದಾನದ ಮೇಲೆ ಈ ವಿಚಾರ ಪರಿಣಾಮ ಬೀರಬಹುದು ಎಂಬ ಉದ್ದೇಶದಿಂದ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿಎಂ ಆದಿಯಾಗಿ ರಾಜ್ಯ ಸರ್ಕಾರದ ಸಚಿವರೆಲ್ಲರೂ ಸ್ಪಷ್ಟನೆ ನೀಡಿದ್ದರು.
ಆದರೆ ಈಗ ಉಪಚುನಾವಣೆ ಮುಗಿದಿದ್ದು ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ವಿಶೇಷವೆಂದರೆ ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅಲ್ಪಸಂಖ್ಯಾತರೇ ನಿರ್ಣಾಯಕ ಪಾತ್ರ ವಹಿಸಿದ್ದರು. ಹೀಗಾಗಿ ಈಗ ಮತ್ತೆ ಮುಸ್ಲಿಮ್ ಮೀಸಲಾತಿ ವಿಚಾರ ಮುನ್ನಲೆಗೆ ಬಂದಿದೆ.
ಈ ಬಗ್ಗೆ ಮಾತನಾಡಿರುವ ಸಿಎಂ ಅಂತಹ ಪ್ರಸ್ತಾವನೆಯನ್ನು ತಳ್ಳಿ ಹಾಕಿಲ್ಲ. ಒಂದು ವೇಳೆ ಮುಸ್ಲಿಮರಿಗೆ ಮೀಸಲಾತಿ ಕೊಟ್ಟರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿದ್ದು ಸರ್ಕಾರ ಈ ಪ್ರಸ್ತಾವನೆಗೆ ಅಂಕಿತ ಹಾಕುವ ಎಲ್ಲಾ ಲಕ್ಷಣಗಳಿವೆ. ಇದಕ್ಕೆ ಬಿಜೆಪಿಯಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ನೋಡಬೇಕಿದೆ.