ರಾಜ್ಯ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ, ರಾಜ್ಯದ ಜನರ ಪ್ರಾಣ ಕಾಪಾಡಬೇಕು ಎಂಬ ಜವಾಬ್ದಾರಿ ಇದ್ದರೆ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಸಂಪುಟದಿಂದ ವಜಾ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಂತೋಷ್ ಪಾಟೀಲ್ ಅವರ ಸಹೋದರ ನೀಡಿರುವ ದೂರಿನಲ್ಲಿ ತನ್ನ ಸಹೋದರನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಇದು ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಅಪರಾಧವೂ ಹೌದು. ಹಾಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 ರಡಿ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಬೇಕು ಎಂದರು.
ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಗೆ ಹಳ್ಳಿ ರಸ್ತೆಗಳನ್ನು ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಇದು ಒಟ್ಟು ರೂ. 4 ಕೋಟಿ ವೆಚ್ಚದ 108 ಕಾಮಗಾರಿಗಳು. ಇವೆಲ್ಲವನ್ನು ಖಾಸಗಿಯವರ ಬಳಿ ಸಾಲ ಮಾಡಿ, ಹೆಂಡತಿ ಒಡವೆಗಳನ್ನು ಅಡವಿಟ್ಟು ಸಾಲ ತಂದು ಗುಣಮಟ್ಟದ ಕೆಲಸ ಮಾಡಿ ಮುಗಿಸಿದ್ದಾನೆ. ಒಬ್ಬ ಮಂತ್ರಿಯಾಗಿ ತಾವೇ ಹೇಳಿ ಮಾಡಿಸಿದ ಕಾಮಗಾರಿಗಳ ವರ್ಕ್ ಆರ್ಡರ್ ಮತ್ತು ಬಿಲ್ ಪಾವತಿ ಮಾಡಲು ಶೇ. 40 ಕಮಿಷನ್ ಕೇಳಿದ್ದಾರೆ ಎಂದು ವಿವರಿಸಿದರು.
ಸಂತೋಷ್ ಪಾಟೀಲ್ ಗೆ ಬಿಲ್ ಹಣ ಪಡೆಯಲು ಬೆಂಗಳೂರಿಗೆ ತಿರುಗಿ ತಿರುಗಿ ಸಾಕಾಗಿದೆ. ಹಲವಾರು ಬಾರಿ ಈಶ್ವರಪ್ಪ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದಾನೆ. ಇದರ ಜೊತೆಗೆ ಪ್ರಧಾನಿಗಳಿಗೆ ಮತ್ತು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರಾದ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾನೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾನೆ. ಇಷ್ಟೆಲ್ಲ ಮಾಡಿದ್ರೂ ಕೇಳಿದಷ್ಟು ಕಮಿಷನ್ ಕೊಟ್ಟಿಲ್ಲ ಎಂದು ವರ್ಕ್ ಆರ್ಡರ್ ಕೊಟ್ಟಿಲ್ಲ, ಹಣ ಬಿಡುಗಡೆ ಮಾಡಿಲ್ಲ. ತುಂಬ ಸಲ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಾನವಿ ಮಾಡಿದ್ರೂ, ಈಗ ನನಗೆ ಸಂತೋಷ್ ಪಾಟೀಲ್ ಯಾರು ಅಂತಲೇ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.