ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನೂತನ ಪೊಲೀಸ್ ಠಾಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ನಮ್ಮ ಮಾನ, ಪ್ರಾಣ ಕಾಪಾಡುವ ಪೊಲೀಸರಿಗೆ ಉತ್ತಮ ಮೂಲಸೌಲಭ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಸುಸಜ್ಜಿತವಾದ ಪೊಲೀಸ್ ಠಾಣೆ ನಿರ್ಮಿಸುವ ಮೂಲಕ ಪೊಲೀಸರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ನೀಡುವಲ್ಲಿ ವಿ.ಸೋಮಣ್ಣ ಅವರು ಯಶಸ್ವಿಯಾಗಿದ್ದಾರೆ ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಗೋವಿಂದರಾಜನಗರ ಪೊಲೀಸ್ ಠಾಣೆ ಸುಸಜ್ಜಿತ ಕಟ್ಟಡವಾಗಿದ್ದು, ಈ ಥರದ ಪೊಲೀಸ್ ಠಾಣೆ ಎಲ್ಲಿಯೂ ಕಾಣಸಿಗುವುದಿಲ್ಲ. ವಿ.ಸೋಮಣ್ಣ ಅವರ ಅಭಿವೃದ್ಧಿ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಎಂದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಬೆಂಗಳೂರಿನ ಮೂಲಭೂತ ಸೌಲಭ್ಯಗಳಿಗೆ ಹೇಗೆ ಒತ್ತು ನೀಡಬೇಕೆಂದು ಹಿರಿಯ ನಾಯಕರಿಂದ ಕಲಿತಿದ್ದೇನೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಗೋವಿಂದರಾಜನಗರ ವಿಶಾಲವಾದ ಕ್ಷೇತ್ರ. ಹೀಗಾಗಿ ಇಲ್ಲಿಗೆ ಪ್ರತ್ಯೇಕ ಪೊಲೀಸ್ ಠಾಣೆಯ ಅವಶ್ಯಕತೆಯಿತ್ತು. ಪೊಲೀಸ್ ಠಾಣೆಯ ನಿರ್ಮಾಣದ ಮೂಲಕ ಕ್ಷೇತ್ರದ ಜನತೆಯ ಅಳಿಲು ಸೇವೆ ಮಾಡಿದ್ದೇನೆ. ಗೋವಿಂದರಾಜನಗರ ಹಾಗೂ ವಿಜಯನಗರ ನನ್ನ ಎರಡು ಕಣ್ಣುಗಳಿದ್ದಂತೆ. ಗೋವಿಂದರಾಜನಗರದ ಅಭಿವೃದ್ಧಿಯ ಜೊತೆಗೇ ವಿಜಯನಗರದ ಅಭಿವೃದ್ಧಿಯೂ ನಮ್ಮ ಹೊಣೆ. ಸಾಮಾನ್ಯ ಜನರ ನೋವನ್ನು ಪರಿಹರಿಸಲು ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸುವುದೇ ನನ್ನ ಸಂಕಲ್ಪ ಎಂದರು.
ಸಂಸದ ತೇಜಸ್ವಿ ಸೂರ್ಯ, ಶಾಸಕ ಎ.ದೇವೇಗೌಡ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇದ್ದರು.