ಬೆಂಗಳೂರು: ನೂತನ ಸಚಿವರಿಗೆ ಶೀಘ್ರದಲ್ಲೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರಾದರೂ ಈ ಪ್ರಕ್ರಿಯೆ ಅಷ್ಟು ಸಲೀಸಾಗಿ ನಡೆಯುವಂತೆ ಕಾಣುತ್ತಿಲ್ಲ. ಪ್ರಮುಖ ಖಾತೆಗಾಗಿ ಸಂಪುಟದ ಸದಸ್ಯರು ಒತ್ತಡ ತರುತ್ತಿರುವುದೇ ಇದಕ್ಕೆ ಕಾರಣವಾಗಿದೆ.
ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾದವರಲ್ಲಿ 6 ಮಂದಿ ಮಾತ್ರ ಹೊಸಬರು. ಉಳಿದವರು ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲೂಇದ್ದರು. ಹಾಗಾಗಿ ಹಳಬರಿಗೆ ಈ ಮೊದಲು ಅವರು ನಿರ್ವಹಿಸುತ್ತಿದ್ದ ಖಾತೆಯನ್ನೇ ನೀಡಲಾಗುತ್ತದೆ ಎಂಬ ವರ್ತಮಾನವಿತ್ತು. ಅದರಲ್ಲೂ ಮಿತ್ರಮಂಡಳಿಯ ಕೋಟಾದವರಿಗೆ ಹಳೆಯ ಖಾತೆಗಳೇ ಫಿಕ್ಸ್ ಎಂಬ ಮಾತು ಕೇಳಿ ಬಂದಿತ್ತು.
ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು ಪ್ರಮುಖ ಖಾತೆಗಳಿಗೆ ಭಾರಿ ಬೇಡಿಕೆ ಬಂದಿದೆ. ಬೆಂಗಳೂರು ಅಭಿವೃದ್ಧಿ, ಗೃಹ, ಜಲಸಂಪನ್ಮೂಲ, ಇಂಧನ, ಕಂದಾಯ, ಲೋಕೋಪಯೋಗಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಖಾತೆಗಳು ಈ ಪಟ್ಟಿಯಲ್ಲಿವೆ. ಹಾಗಾಗಿ ಖಾತೆ ಹಂಚಿಕೆ ಪ್ರಕ್ರಿಯೆ ಸಂಬಂಧ ಮುಖ್ಯಮಂತ್ರಿಯವರು ಎಚ್ಚರಿಕೆಯ ಹೆಜ್ಜೆಯಿಡಬೇಕಾಗಿ ಬಂದಿದೆ.
ಪಕ್ಷದಿಂದಲೂ ಒತ್ತಡ!
ಈ ಮಧ್ಯೆ ಸಂಘ ಪರಿವಾರದ ಮೂಲದಿಂದ ಬಂದವರಿಗೆ ಪ್ರಮುಖ ಖಾತೆಗಳನ್ನೇ ನೀಡಬೇಕು. ಸರಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವಂತಹ ಖಾತೆಗಳನ್ನು ಸಂಘ ಪರಿವಾರ ಮೂಲದವರಿಗೆ ವಹಿಸಬೇಕು ಎಂಬ ಅಭಿಪ್ರಾಯ ಬಂದಿದೆ. ಈ ಅಂಶವನ್ನೂ ಗಮನದಲ್ಲಿ ಇರಿಸಿಕೊಂಡು ಖಾತೆ ಹಂಚಿಕೆಗಾಗಿ ಅಳೆದೂ ತೂಗಿ ಮುಂದುರಿಯಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕೊಠಡಿ ಹಂಚಿಕೆ
ಬೊಮ್ಮಾಯಿ ಸಂಪುಟ ಸೇರ್ಪಡೆಯಾದ 29 ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ. ಈ ಪೈಕಿ ಬಿಎಸ್ವೈ ಸಂಪುಟದಲ್ಲಿ ಇದ್ದವರಿಗೆ ಈ ಮೊದಲು ಹಂಚಿಕೆಯಾಗಿದ್ದ ಕೊಠಡಿಗಳನ್ನೇ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಸಚಿವರು ಕಚೇರಿ ಪ್ರವೇಶ ಮಾಡಿಲ್ಲ.
ಸುರೇಶ್ಕುಮಾರ್ಗೆ ಸ್ಥಾನ ತಪ್ಪಿದ್ದಕ್ಕೆ ಪಕ್ಷದಲ್ಲಿ ಬೇಸರ
ಬೆಂಗಳೂರು: ಎಸ್.ಸುರೇಶ್ ಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ಇರುವ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರದ ವಲಯದಲ್ಲಿಬೇಸರ ವ್ಯಕ್ತವಾಗಿದೆ. ಜಾತಿವಾರು ಪ್ರಾತಿನಿಧ್ಯದ ಹಿನ್ನೆಲೆಯಲ್ಲಿಸುರೇಶ್ ಕುಮಾರ್ ಅವರಿಗೆ ಈ ಬಾರಿ ಸಚಿವ ಸ್ಥಾನ ತಪ್ಪಿದೆ. ಅನುಭವಿಗಳನ್ನು ಇಂತಹ ಕೋಟಾ ಸಂಸ್ಕೃತಿಯ ಹೊರತಾಗಿಯೂ ಪರಿಗಣಿಸಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಸಂಪುಟದಲ್ಲಿ4 ಸ್ಥಾನಗಳು ಖಾಲಿಯಿವೆ. ಸ್ವಲ್ಪ ದಿನಗಳ ಬಳಿಕ 2-3 ಸ್ಥಾನ ಭರ್ತಿ ಮಾಡುವ ಪ್ರಸ್ತಾಪವಿದೆ. ಆ ವೇಳೆ ಅವಕಾಶ ನೀಡಬೇಕು ಎಂದು ಪಕ್ಷದ ಪ್ರಮುಖರು ಸಿಎಂ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಈ ನಡುವೆ ಮುಂದಿನ ಹಂತದ ಸಂಪುಟ ವಿಸ್ತರಣೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಅವರಿಗೂ ಸ್ಥಾನ ನೀಡಬಹುದು ಎಂದು ಹೇಳಲಾಗುತ್ತಿದೆ.