Publish Date: Thu, 21 Jul 2022 (16:00 IST)
Updated Date: Thu, 21 Jul 2022 (16:04 IST)
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿ, ಪೊಲೀಸರು ಸಲ್ಲಿಸಿರುವ 'ಬಿ ರಿಪೋರ್ಟ್' ನ್ಯಾಯ ಸಿಗಬಹುದೆಂಬ ಭರವಸೆಯಿಂದ ಕಾಯುತ್ತಿದ್ದ ಮೃತನ ಕುಟುಂಬದ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಕಾರಣಕ್ಕಾಗಿ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದು ಎಂದು ಹೇಳಿದ್ದಾರೆ. ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ಬಿಜೆಪಿ ಶಾಸಕರು, ಆರೋಪಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಪೊಲೀಸ್ ಇಲಾಖೆ ಸ್ವಲ್ಪ ತಡವಾಗಿ 'ಬಿ ರಿಪೋರ್ಟ್' ರೂಪದಲ್ಲಿ ನೀಡಿದೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ. ಸಾವಿಗೆ ಈಶ್ವರಪ್ಪ ಅವರೇ ನೇರಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದರೂ, ಆರೋಪಿ ಸ್ಥಾನದಲ್ಲಿರುವ ಈಶ್ವರಪ್ಪ ಅವರನ್ನು ಒಮ್ಮೆಯೂ ವಿಚಾರಣೆ ನಡೆಸದಿರುವುದು ತನಿಖೆಯ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ ಎಂದಿದ್ದಾರೆ.