ಬೆಂಗಳೂರು :ಕೆ.ಆರ್. ನಗರದಿಂದ ಕಾರ್ಯಕರ್ತರಾಗಿ ನಿಗಮ ಮಂಡಳಿಗೆ ಆಯ್ಕೆಯಾಗಿದ್ದ ಐಶ್ವರ್ಯಾ ಮಹದೇವ್ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಶಾಸಕರ ತೀವ್ರ ವಿರೋಧವೇ ಕಾರಣವೆನ್ನಲಾಗಿದೆ. ಈ ಮುನ್ನ 34 ಅಭ್ಯರ್ಥಿಗಳ ಪಟ್ಟಿಯೊಂದನ್ನು ಸಿದ್ದಪಡಿಸಲಾಗಿತ್ತು. ಈ ಪಟ್ಟಿಯಲ್ಲಿ ಐಶ್ವರ್ಯ ಮಹದೇವ್ ಹೆಸರೂ ಸಹ ಸೇರ್ಪಡೆಯಾಗತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆ.ಆರ್.ನಗರ ಶಾಸಕ ರವಿಶಂಕರ್, ಐಶ್ವರ್ಯ ಮಹದೇವ್ ಹೆಸರು ಕೈಬಿಡದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಕಾಂಗ್ರೆಸ್ ಪಕ್ಷಕ್ಕೆ ಅಕ್ಷರಶಃ ಕಗ್ಗಂಟಾಗಿ ಪರಿಣಮಿಸಿದೆ. ಸಂಕ್ರಾಂತಿ ಹಬ್ಬದ ವೇಳೆಯಲ್ಲೇ ಬಿಡುಗಡೆಯಾಗ ಬೇಕಿದ್ದ ನಿಗಮ ಮಂಡಳಿ ಅಧ್ಯಕ್ಷರ ಮೊದಲ ಪಟ್ಟಿ ಇದುವರೆಗೂ ಬಿಡುಗಡೆಯಾಗದಿರಲು ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ಗುದ್ದಾಟವೇ ಕಾರಣ ಎನ್ನಲಾಗಿದೆ. ಇದಕ್ಕೂ ಮುನ್ನ ಪಟ್ಟಿಯಲ್ಲಿ ಲಿಂಗಾಯಿತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂಬ ಆರೋಪವೂ ಮುಖಂಡರಿಂದ ಕೇಳಿಬಂದಿತ್ತು. ಬಳಿಕ ಪಟ್ಟಿ ಸಿದ್ದಪಡಿಸುವಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.