Publish Date: Sat, 07 May 2016 (12:29 IST)
Updated Date: Sat, 07 May 2016 (12:31 IST)
ಭೀಕರ ಬರದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನವದೆಹಲಿಯಲ್ಲಿ ಶನಿವಾರ ಕರೆದಿದ್ದಾರೆ.
ಒನ್ ಟು ಒನ್ ಸಭೆ ಇದಾಗಿದ್ದು ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗಲಿರುವ ಮೋದಿ ಕೃಷಿ– ಕುಡಿಯುವ ನೀರಿನ ಸಮಸ್ಯೆ, ಮೇವಿನ ಅಭಾವ ಕುರಿತು ಸಮಗ್ರ ಮಾಹಿತಿ ಪಡೆಯಲಿದ್ದಾರೆಂದು ಮೂಲಗಳು ತಿಳಿಸಿವೆ. ಪ್ರಧಾನಿ ಮಂತ್ರಿಗಳ ಜೊತೆಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡುವುದಾಗಿ ಜತೆಗೆ ಕಳಸಾ ಬಂಡೂರಿ ಯೋಜನೆ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ನಿನ್ನೆ ತಿಳಿಸಿದ್ದರು.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳು ಪ್ರಸ್ತುತ ವರ್ಷ ಭೀಕರ ಬರಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗಿತಿಗಳನ್ನು ಪರಿಶೀಲಿಸಿದ್ದರು. ಜಿಲ್ಲಾಡಳಿತದೊಡನೆ ಸಭೆ ನಡೆಸಿ ಮುಂಗಾರು ಆರಂಭವಾಗುವವರೆಗೆ ಬರ ಕಾಮಗಾರಿ ನಿರಂತರವಾಗಿರಲಿ ಎಂದು ಆದೇಶಿಸಿದ್ದರು. ಜತೆಗೆ ಕೇಂದ್ರದಿಂದಲೂ ಕೂಡ ಹೆಚ್ಚಿನ ಬರ ಪರಿಹಾರ ಕೇಳುವುದಾಗಿ ತಿಳಿಸಿದ್ದರು.