Select Your Language

Notifications

webdunia
webdunia
webdunia
webdunia

ಎಸ್‍ಸಿ ಜನಗಣತಿಯಲ್ಲಿ ಶೇ 50ಕ್ಕಿಂತ ಹೆಚ್ಚು ಜನರು ಭಾಗವಹಿಸಲಾಗದು: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಶುಕ್ರವಾರ, 4 ಜುಲೈ 2025 (15:37 IST)
ಬೆಂಗಳೂರು: ಪರಿಶಿಷ್ಟ ಜಾತಿಗಳ (ಎಸ್.ಸಿ) ಜನಗಣತಿಯಲ್ಲಿ ಶೇ 50ಕ್ಕಿಂತ ಹೆಚ್ಚು ಜನರು ಭಾಗವಹಿಸಲು ಸಾಧ್ಯವೇ ಇಲ್ಲ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
 
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಜನಗಣತಿ ನಡೆಯುತ್ತಿದೆ. ಆಗುತ್ತಿರುವ ಅನಾಹುತಗಳ ಬಗ್ಗೆ ಮಾಧ್ಯಮಗಳು ತಿಳಿಸುತ್ತಿವೆ. ನಮ್ಮ ಮನೆಗೂ ಯಾರೂ ಬಂದಿಲ್ಲ; ಆದರೆ, ಸ್ಟಿಕರ್ ಅಂಟಿಸಿ ಹೋಗಿದ್ದಾರೆ ಎಂದು ಟೀಕಿಸಿದರು. ಪರಿಶಿಷ್ಟ ಜಾತಿಯವರ ಮನೆಗೆ ಬಂದು ಸ್ಟಿಕರ್ ಅಂಟಿಸಿ ಹೋಗಿದ್ದರೆ ಅದನ್ನು ನಾವು ಒಪ್ಪಬಹುದಿತ್ತು; ಎಲ್ಲ ಮನೆಗಳಿಗೂ ಸ್ಟಿಕರ್ ಅಂಟಿಸಿಕೊಂಡು ಹೋಗುತ್ತಿದ್ದಾರೆ ಎಂದು ಗಮನಕ್ಕೆ ತಂದರು.
 
ಆನ್‍ಲೈನ್‍ನಲ್ಲೂ ಅವಕಾಶ ಇದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಅಲ್ಲಿ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ನಂಬರ್ ಹೇಳಬೇಕು; ಬೇರೆ ಬೇರೆ ಮಾಹಿತಿ ಕೇಳುತ್ತದೆ. ಅದನ್ನು ಒದಗಿಸಲು ಸಾಧ್ಯವೇ ಇಲ್ಲ; ಎಲ್ಲರೂ ವಿದ್ಯಾವಂತರಲ್ಲ. ಕೆಲವರಿಗೆ ಸರ್ಟಿಫಿಕೇಟ್ ಇದೆ. ಇನ್ನೂ ಕೆಲವರಿಗೆ ಇಲ್ಲ ಎಂದು ತಿಳಿಸಿದರು. ಇದು ಸರಕಾರದ ಕಣ್ಣೊರೆಸುವ ತಂತ್ರವೇ ಹೊರತು ಇದರಲ್ಲಿ ಸರಿಯಾದ ಅಂಕಿಅಂಶ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು. ಪರಿಶಿಷ್ಟ ಜಾತಿಗಳಿಗೆ ಅನ್ಯಾಯ ಮಾಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 
 
ಕಾಂಗ್ರೆಸ್ ಪಕ್ಷದಲ್ಲಿ ಹಗ್ಗಜಗ್ಗಾಟ
ಈ ಸರಕಾರ ನಾನು ಮುಖ್ಯಮಂತ್ರಿ, ನೀನು ಮುಖ್ಯಮಂತ್ರಿ ಎನ್ನುವುದರಲ್ಲೇ ಇದೆ. ಜನರ ಕೆಲಸಗಳನ್ನು ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಅನೇಕ ಜನರಿಗೆ ಮೂರ್ನಾಲ್ಕು ತಿಂಗಳಿನಿಂದ ಗ್ಯಾರಂಟಿ ಹಣ ಸಿಗುತ್ತಿಲ್ಲ; ಜೊತೆಗೆ ನಾನೇ 5 ವರ್ಷಕ್ಕೆ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಕುತ್ತು ಬಂದುದರ ಸಂಕೇತ ಎಂದು ವಿಶ್ಲೇಷಿಸಿದರು.
 
ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಗ್ಗಜಗ್ಗಾಟ ಆರಂಭವಾಗಿದೆ. ಅವರ ಪಕ್ಷದ ಪ್ರತಿಯೊಬ್ಬ ಶಾಸಕರೂ ಮುಖ್ಯಮಂತ್ರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಗೆಯವರು ಅವರ ಮಾನಸಿಕ ಸ್ಥಿತಿ ಸರಿಯಿಲ್ಲ; ಅವರು ಮನೆಯಲ್ಲಿ ಇರುವುದೇ ಲೇಸು ಎಂದಿದ್ದಾರೆ. ನಿಮ್ಮ ಶಾಸಕರು ನಿಮ್ಮನ್ನು ಯಾವ ಮಟ್ಟಕ್ಕೆ ಗೌರವಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
 
ರಾಜ್ಯದ ಸಚಿವರ ಪ್ರಚಾರದ ಗೀಳು
ಕೆಲವು ಸಚಿವರು ಅವರ ಸಚಿವ ಸ್ಥಾನದ ವಿಚಾರದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬಿಟ್ಟಿದ್ದಾರೆ. ಅವರು ಆರೆಸ್ಸೆಸ್, ಬಿಜೆಪಿಯನ್ನು ನಿಂದಿಸಬೇಕು; ಸುಳ್ಳು ಸುದ್ದಿ ಹಬ್ಬಿಸಬೇಕು. ದಿನವೂ ಟಿ.ವಿ. ಮಾಧ್ಯಮಗಳಲ್ಲಿ ನಮ್ಮ ಮುಖ ಬರುತ್ತಿರಬೇಕೆಂಬ ಗೀಳಿಗೆ ಬಿದ್ದಿದ್ದಾರೆ. ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ನಿಷೇಧದ ಮಾತನಾಡಿದ್ದಾರೆ. ನೀವು ಹುಟ್ಟಿದ ಮೇಲೆ ಆರೆಸ್ಸೆಸ್ ಹುಟ್ಟಿಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಸವಾಲು ಹಾಕಿದರು. ಬಿಜೆಪಿ ಎಂಬ ಹೆಸರು ಮಾತ್ರ ನೀವು ಹುಟ್ಟಿದ ನಂತರ ಹುಟ್ಟಿರಬಹುದು ಎಂದು ಹೇಳಿದರು.
 
ಆರೆಸ್ಸೆಸ್‍ಗೆ 100 ವರ್ಷ ಆಗುತ್ತಿದೆ. ನೆಹರೂ, ಇಂದಿರಾ ಗಾಂಧಿ, ನಿಮ್ಮ ತಂದೆಯಿಂದ ಏನೂ ಮಾಡಲು ಆಗಿಲ್ಲ ಎಂದ ಅವರು, ಬಡವರು ನರೇಗದಡಿ ಕೆಲಸ ಮಾಡಿ ಹಣ ಬಂದಿಲ್ಲವೆಂದು ಆರು ತಿಂಗಳಿಂದ ಕಾಯುತ್ತಿದ್ದಾರಲ್ಲವೇ? ಅದನ್ನು ಕೊಡಿಸುವ ಯೋಗ್ಯತೆ ನಿಮಗಿದೆಯೇ ಎಂದು ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನಿಸಿದರು. ನೀವು ನಿಮ್ಮ ಇಲಾಖೆ ಬಗ್ಗೆ ಯಾವಾಗ ಮಾತನಾಡುತ್ತೀರಿ ಎಂದು ಕೇಳಿದರು.
 
ಜನರು ಎಲ್ಲ ಕಡೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ನೀವು ಇಲಾಖೆಗೆ ಸೂಕ್ತರೇ ಎಂದು ಯೋಚಿಸಿ ನೋಡಿ ಎಂದು ಒತ್ತಾಯಿಸಿದರು. ನೀವಲ್ಲ; ನಿಮ್ಮ ಯಾವ ಪೀಳಿಗೆ ಬಂದರೂ ಆರೆಸ್ಸೆಸ್ ಅನ್ನು ಮುಗಿಸಲಾಗದು ಎಂದು ಸವಾಲು ಹಾಕಿದರು.
 
ಕೆಲವೆಡೆ ಮಳೆ ಹೆಚ್ಚಳ, ಇನ್ನೂ ಕೆಲವೆಡೆ ಮಳೆ ಇಲ್ಲದೇ ಜನರು ಕಂಗಾಲಾಗಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಇದರ ಬಗ್ಗೆ ಸರಕಾರಕ್ಕೆ ಚಿಂತೆಯೇ ಇಲ್ಲ. ತಮ್ಮ ಹುಳುಕು ಮುಚ್ಚಿಕೊಳ್ಳಲು ಅನೇಕ ವಿಚಾರಗಳನ್ನು ಎತ್ತಿ ತೋರುತ್ತಿದ್ದಾರೆ ಎಂದು ಆಕ್ಷೇಪಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿಗಳು ಅವಮಾನ ಮಾಡಿದಾಗ ಐಎಎಸ್ ಸಂಘದವರು ಎಲ್ಲಿ ಹೋಗಿದ್ರು: ಬಿವೈ ವಿಜಯೇಂದ್ರ