Publish Date: Wed, 24 Jun 2026 (21:34 IST)
Updated Date: Wed, 24 Jun 2026 (21:36 IST)
ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿನ ಅಡ್ಡ ಮತದಾನದ ವಿಚಾರವನ್ನು ಬಿಜೆಪಿಯ ಕೇಂದ್ರದ ನಾಯಕರು ತೀವ್ರವಾಗಿ ಪರಿಗಣಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಇಂಥ ಘಟನೆ ನಮ್ಮ ಪಕ್ಷದಲ್ಲಿ ಆಗಬಾರದಿತ್ತು. ಅದಾದ ಮೇಲೆ ಈಗ ಮುಂದಿನ ಕಾರ್ಯದ ಕುರಿತು ಕೇಂದ್ರದ ನಾಯಕರು ಮುಖಂಡರ ಗಮನಕ್ಕೆ ತಂದಿದ್ದಾರೆ. ಕೇಂದ್ರದ ನಾಯಕರು ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ತೀಕ್ಷ್ಣವಾಗಿ ತೆಗೆದುಕೊಳ್ಳಲಿದ್ದಾರೆ ಎಂಬ ಅನಿಸಿಕೆ ತಮ್ಮದು ಎಂದು ನುಡಿದರು.
ಯಾರು ಈಗಾಗಲೇ ಈ ರೀತಿ ಅಡ್ಡ ಮತದಾನದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಅವರಿಗೆ ಇದೆ. ಸತ್ಯಶೋಧನಾ ಸಮಿತಿ ನೇಮಿಸಿದ್ದು, ಅದು ವರದಿ ತಯಾರಿಸಿ ಕೇಂದ್ರಕ್ಕೆ ಒಪ್ಪಿಸಲಿದೆ ಎಂದು ವಿವರಿಸಿದರು. ಒಟ್ಟಾರೆ ಯಾರು ಇಂಥ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಕಿದ್ದಾರೋ ಅವರ ವಿರುದ್ಧ ಮುಂದಿನ ದಿನಗಳಲ್ಲಿ ಕೇಂದ್ರದ ನಾಯಕರು ಕ್ರಮ ಜರುಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಆಗಲೇಬೇಕು ಎಂದು ಅವರು ತಿಳಿಸಿದರು. ನಮ್ಮಿಂದ 11 ಮತ ಪಡೆದುದಾಗಿ ಕಾಂಗ್ರೆಸ್ಸಿನವರು ಬೀಗುತ್ತಿದ್ದಾರೆ. ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಮತ್ತು ಉಳಿದ ನಾಯಕರು ಬೀಗುವುದಾದರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಯಾರಾದರೂ ಹೋದರೆ ಟೀಕಿಸುವುದ್ಯಾಕೆ ಎಂದು ಕೇಳಿದರು. ನೀವು ಅಧಿಕಾರದಲ್ಲಿ ಇದ್ದೀರಿ. ನಿಮ್ಮ ಯೋಗ್ಯತೆ ಅಷ್ಟೇ ಎಂದು ಟೀಕಿಸಿದರು.
ಎಲ್ಲವನ್ನೂ ಹಣ ಕೊಟ್ಟು ಕೊಂಡುಕೊಳ್ಳಬಹುದೆಂದು ಅಂದುಕೊಂಡಿದ್ದರೆ, ಇದು ನಿಮಗೂ ಮುಳುವಾಗಲಿದೆ ಎಂಬುದನ್ನು ಯೋಚಿಸಿ ಎಂದು ತಿಳಿಸಿದರು. ಹಿಂದೆ ಬಿಜೆಪಿ ವಿರುದ್ಧ ರಾಜಕೀಯ ವ್ಯಭಿಚಾರದ ಮಾತನಾಡುತ್ತಿದ್ದರು. ಈಗ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದರು. ನೀವು ಮಾಡಿದಾಗ ಪ್ರಜಾಪ್ರಭುತ್ವದ ಗೆಲುವು ಎನ್ನುತ್ತೀರಿ ಎಂದು ಆಕ್ಷೇಪಿಸಿದರು. ನಿಮ್ಮದು ದ್ವಿಮುಖ ನೀತಿಯಲ್ಲವೇ ಎಂದು ಕೇಳಿದರು. ಮುಂದಿನ ದಿನಗಳಲ್ಲಿ ನಿಮಗೂ ಇಂಥದ್ದು ಕಾದಿರಲಿದೆ ಎಂದು ಎಚ್ಚರಿಸಿದರು.
ರಾಜ್ಯಾಧ್ಯಕ್ಷರ ಮತ್ತು ವಿಪಕ್ಷ ನಾಯಕರ ತಲೆದಂಡದ ಬಗ್ಗೆ ನನಗೇನೂ ಅನಿಸುವುದಿಲ್ಲ. ಸರಕಾರ ಇಟ್ಟುಕೊಂಡು, ಅವರ ಶಾಸಕರನ್ನು ಬೇರೆ ಕಡೆ ಕರೆದೊಯ್ದು ದನಗಳನ್ನು ಇಟ್ಟಂತೆ ಇಟ್ಟುಕೊಂಡು ಗನ್ ಪಾಯಿಂಟ್‍ನಲ್ಲಿ ಮತ ಹಾಕಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ಆ ರೀತಿ ಸರಕಾರ ಮಾಡಿದಾಗ ಏನೋ ನಡೆಯುತ್ತಿದೆ ಎಂದು ನಾವು ಎಚ್ಚತ್ತುಕೊಳ್ಳಬೇಕಿತ್ತು ಎಂದು ಹೇಳಿದರು. ಈ ರೀತಿ ಮಾಡಿಯಾರೆಂದು ಅಂದುಕೊಂಡು ಸ್ವಲ್ಪ ಸ್ವಾತಂತ್ರ್ಯ ಕೊಟ್ಟೆವು. ಕೆಲವರು ಆಮಿಷಗಳಿಗೆ ಬಿದ್ದೋ, ಭಯಕ್ಕೋ, ಬೇರೆ ಯಾವುದೋ ಕಾರಣಕ್ಕೆ ನಮ್ಮವರೂ ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಬೇಸರ ತರುವ ವಿಚಾರ ಎಂದು ತಿಳಿಸಿದರು.
ನಾವು ಅನ್ನ ತಿಂದು ಬದುಕಬೇಕು; ಸೆಗಣಿ ತಿಂದು ಬದುಕಬಾರದೆಂದು ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸದಾನಂದಗೌಡರು ತಾವು ಈ ಕುರಿತು ಎಚ್ಚರಿಸಿದ್ದೆ ಎಂದಿದ್ದು, ನನಗದರ ಕುರಿತು ಗೊತ್ತಿರಲಿಲ್ಲ. ಅವರು ಹೇಳಿಕೆ ಕೊಟ್ಟ ಬಳಿಕ ನನಗೂ ಅದು ಗೊತ್ತಾಗಿದೆ. ಯಾರ ಗಮನಕ್ಕೆ ತಂದಿದ್ದರೋ ಅವರು ಎಚ್ಚರಿಕೆಯಿಂದ ಕೆಲಸ ಮಾಡಬೇಕಿತ್ತು ಎಂದು ತಿಳಿಸಿದರು.
ಮತದಾನ ಗೌಪ್ಯ ಇರಬಹುದು; ಗೌಪ್ಯ ಅಲ್ಲದೇ ಇರಬಹುದು. ಪಕ್ಷದ ನಿಷ್ಠಾವಂತರಾಗಿದ್ದರೆ ಅವರು ಎಲ್ಲಿದ್ದರೇನು? ಅವರನ್ನು ಹಿಡಿದಿಟ್ಟರೂ, ಹಿಡಿದಿಡದೇ ಇದ್ದರೂ ಎರಡೂ ಒಂದೇ. ಅಡ್ಡÀ ಮತದಾನ ಮಾಡುವುದೇ ಸರಿ ಎಂದು ಯಾರಾದರೂ ಮನಸ್ಸಿನಲ್ಲಿ ಅಂದುಕೊಂಡಿದ್ದರೆ, ಅವರನ್ನು ಹಿಡಿದಿಟ್ಟರೂ ತಾವು ಮಾಡುವುದನ್ನು ಮಾಡಿಯೇ ಮಾಡುತ್ತಾರೆ. ಇಂಥ ತಪ್ಪು ಮಾಡಬಾರದಿತ್ತು. ಈ ಮೂಲಕ ಪಕ್ಷದ ಗೌರವ ಹಾಳು ಮಾಡಿದ್ದಾರೆ. ಅವರು ಯಾರೆಂದು ನಮ್ಮ ಮುಖಂಡರಿಗೆ ಗೊತ್ತಿದೆ. ಕೆಲವು ಕಾರಣಗಳಿಂದ ಅವರ ಹೆಸರನ್ನು ಹೊರಗಡೆ ಹೇಳುತ್ತಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಬಿಡದಿ ಟೌನ್‍ಶಿಪ್ ಮಾಡುವುದಿದೆಯಲ್ಲವೇ? ಇದಕ್ಕಿಂತ ಕೆಟ್ಟದು ಬೇರೊಂದಿಲ್ಲ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಫಲವತ್ತಾದ ನೀರಾವರಿ ಪ್ರದೇಶ, ಡೈರಿಗಳನ್ನು ನಡೆಸುತ್ತಿರುವ ಜಾಗವದು. ಲಕ್ಷಾಂತರ ಮರಗಳೂ ನಾಶ ಆಗಲಿವೆ. ಪರಿಸರಕ್ಕೂ ಹಾನಿ ಆಗಲಿದೆ. ಇದೆಲ್ಲವನ್ನೂ ನೋಡಿದರೆ ಖಂಡಿತ ಅದು ಮಾಡಬಾರದು ಎಂದರು. ಬಾಗೇಪಲ್ಲಿ ಕಡೆ ಬನ್ನಿ. 20 ಅಲ್ಲ; 50 ಸಾವಿರ ಎಕರೆ ಜಾಗ ತೆಗೆದುಕೊಳ್ಳಿ. ಅಲ್ಲಿ ಮಾಡಿ. ಕೃಷ್ಣಾ ನದಿ ನೀರನ್ನು ಅಲ್ಲಿಗೆ ಕೊಡಿ ಎಂದು ಒತ್ತಾಯಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ