Publish Date: Tue, 06 Oct 2026 (13:03 IST)
Updated Date: Tue, 06 Oct 2026 (13:06 IST)
ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ಆಪಾದನೆ ಮಾಡಿದವರ ವಿರುದ್ಧ ಈಗ ಎಫ್.ಐ.ಆರ್. ದಾಖಲಿಸುವುದರ ಮೂಲಕ ಜನರಲ್ಲಿ ಒಂದು ಭಯ ಭೀತಿಯನ್ನು ಹುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಕಾನೂನುಬಾಹಿರ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಇಂದು ಗೌರವಾನ್ವಿತ ರಾಜ್ಯಪಾಲರ ಭೇಟಿಯ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ನಿನ್ನೆ ಬಿಜೆಪಿ- ಜೆಡಿಎಸ್ ಪ್ರಮುಖರು, ಜನಪ್ರತಿನಿಧಿಗಳು ಚುನಾವಣಾಧಿಕಾರಿಯನ್ನು ಭೇಟಿ ಮಾಡಿದ್ದೇವೆ. ಫಾರಂ ಸೆವೆನ್ ಅನ್ನು ಭರ್ತಿ ಮಾಡುವ ವಿಚಾರದಲ್ಲಿ ಏನು ಗೊಂದಲ ದೃಷ್ಟಿಯಾಗಿದೆ, ಅದರ ಬಗ್ಗೆ ಅವರು ಸಮಜಾಯಿಷಿ ಕೊಟ್ಟಿದ್ದಾರೆ. ಯಾವುದೇ ವಿಚಾರ ಇದ್ದರೆ ಅದು ಚುನಾವಣಾ ಆಯೋಗ ಮತ್ತು ಜನರ ಮಧ್ಯದ ವಿಚಾರ. ಇದು ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ ಅಲ್ಲ ಎಂದು ಹೇಳಿದ್ದಾಗಿ ಗಮನಕ್ಕೆ ತಂದರು.
ಸೆವೆನ್ ಫಾರಂ ತುಂಬಿದ ಮೇಲೆ ಒಂದೇ ಒಂದು ಹೆಸರನ್ನು ಕೂಡ ಪಟ್ಟಿಯಿಂದ ಕೈಬಿಟ್ಟಿಲ್ಲ. ಆ ರೀತಿ ಏನಾದರೂ ತೀರ್ಮಾನ ಮಾಡಬೇಕಾದರೆ ಆಯೋಗ ಆ ಅರ್ಜಿಗಳನ್ನು ವಿಲೇಮಾರಿ ಮಾಡುತ್ತದೆ. ದಾಖಲಾತಿಗಳು ಸರಿ ಇದ್ದರೆ ಸೇರಿಸುತ್ತದೆ; ಇಲ್ಲವೇ ತಿರಸ್ಕಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರ ಮಧ್ಯದಲ್ಲಿ ಯಾರು ಸೆವೆನ್ ಫಾರಂಗಳನ್ನು ತುಂಬುತ್ತಾರೋ ಅವರ ವಿರುದ್ಧವಾಗಿ ಬಿ.ಎಸ್.ಎನ್. ಅಡಿಯಲ್ಲಿ ಸ್ವಯಂಪ್ರೇರಿತ ಕೇಸುಗಳನ್ನು ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಏನಾದರೂ ನ್ಯೂನತೆಗಳು ಇದ್ದರೆ ಚುನಾವಣಾ ಆಯೋಗವೇ ಕ್ರಮ ಜರಗಿಸಬೇಕು. ಅಂದರೆ ಅವರು ದೂರು ಕೊಟ್ಟರೆ ಮಾತ್ರ ಪೆÇಲೀಸರು ಎಫ್.ಐ.ಆರ್. ಮಾಡಬಹುದು; ಮತ್ತೆ ಕಾನೂನು ಕ್ರಮ ಜರಗಿಸಬಹುದು ಎಂದು ವಿವರಿಸಿದರು.
ಎಲ್ಲವೂ ಕೂಡ ಪೆÇಲೀಸ್ ಇಲಾಖೆಯ ಮೇಲೆ ಒತ್ತಡ ಹಾಕಿ ಈ ಸರ್ಕಾರ ಮಾಡಿಸುತ್ತಿದೆ. ಬೆಳದಿಂಗಳ ಬೆಳಕಿಗೂ ಕೂಡ ಕೊಡೆ ಹಿಡಿದರು ಎಂಬಂತೆ ಈ ಗೃಹ ಇಲಾಖೆ ನಡೆದುಕೊಳ್ಳುತ್ತಾ ಇದೆ. ಗೃಹ ಇಲಾಖೆಯ ಸಚಿವರು ಗೃಹ ಇಲಾಖೆಯನ್ನು ಬಿಟ್ಟು ಬೇರೆ ಬೇರೆ ಚಟುವಟಿಕೆಗಳಲ್ಲಿ ಇದ್ದಾರೆ ಗೃಹ ಇಲಾಖೆಯನ್ನು ನಿರ್ವಹಿಸಲು ಅವರಿಗೆ ಗೊತ್ತೇ ಇಲ್ಲ ಎಂದು ಟೀಕಿಸಿದರು.
ಗೃಹ ಸಚಿವರು ಭವಿಷ್ಯದಲ್ಲಿ ಜೈಲಿಗೆ ಹೋಗುವ ಕಾಲ ಬಂದಿದೆ. ಅವರಿಗೆ ಎಫ್.ಐ.ಆರ್. ಹಾಕಲು ಅಧಿಕಾರ ಇಲ್ಲ. ಕೋರ್ಟ್ ನಲ್ಲೂ ಕೂಡ ಇವರಿಗೆ ಮುಖಭಂಗ ಆಗಿದೆ, ಸರ್ಕಾರಕ್ಕೆ ಮುಖಭಂಗ ಆಗಿದೆ, ಕಪಾಳಮೋಕ್ಷ ಆಗಿದೆ, ಛೀಮಾರಿ ಹಾಕಿದ್ದಾರೆ ಎಂದು ವಿವರಿಸಿದರು.
ಈ ಸರ್ಕಾರ ಹೋಗಿ ಚುನಾವಣಾ ಕಚೇರಿಯ ಮುಂದೆ ಧರಣಿ ಕುಳಿತಿತ್ತು. ಯಾವ ಸರ್ಕಾರಗಳು ಕೂಡ ಬೀದಿಯಲ್ಲಿ ಈ ರೀತಿ ಕುಳಿತುಕೊಳ್ಳುವುದಿಲ್ಲ. ಸಚಿವಸಂಪುಟ ಸಭೆ ಇದ್ದುದನ್ನು ಮುಂದೂಡಿ, ಚುನಾವಣಾ ಆಯೋಗದ ಕಚೇರಿಯ ಮುಂದೆ ಹೋಗಿ ಕೂತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಮಾನ್ಯ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಅವರೂ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ