ಬೆಂಗಳೂರು: ಎಂಜಿನಿಯರಿಂಗ್ ಪದವಿ ಸೇರಿದಂತೆ ವೃತ್ತಿಪರ ಕೋರ್ಸ್ ಗಳಿಗೆ ನಡೆಯುವ ಸಿಇಟಿ ಪ್ರವೇಶ ಪರಿಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ. ಪರೀಕ್ಷೆ ಯಾವಾಗ ನಡೆಯಲಿದೆ ಸಂಪೂರ್ಣ ವಿವರ ಇಲ್ಲಿದೆ.
ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ಮಾಡಲಾಗುವ ಸಿಇಟಿ ಪರೀಕ್ಷೆ ದಿನಾಂಕವನ್ನು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಪ್ರಕಟಿಸಿದ್ದಾರೆ. ಏಪ್ರಿಲ್ 23 ಮತ್ತು 24 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ಘೋಷಿಸಿದ್ದಾರೆ.
ಜನವರಿ 17 ರಿಂದ ಆನ್ ಲೈನ್ ನಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು ಎಂದು ಸಚಿವರು ಹೇಳಿದ್ದಾರೆ. ಈ ಬಾರಿ ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಆಯ್ದ ಪಿಯು ವಿಜ್ಞಾನ ಕಾಲೇಜುಗಳ ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಗುತ್ತದೆ. ಅವರು ತಮ್ಮ ಕಾಲೇಜಿನ ಇತರೆ ಸಿಬ್ಬಂದಿಗಳಿಗೆ ತರಬೇತಿ ನೀಡಿ ವಿದ್ಯಾರ್ಥಿಗಳ ಅರ್ಜಿ ಭರ್ತಿಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ಈ ಬಾರಿ ಇದೇ ಮೊದಲ ಬಾರಿಗೆ ಆಧಾರ್ ಪ್ರಮಾಣೀಕರಣ ವ್ಯವಸ್ಥೆ ಜಾರಿಗೆ ತರಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಹೆಸರು, ಹುಟ್ಟಿದ ದಿನಾಂಕ, ವಿಳಾಸ ವಿವರಗಳನ್ನು ಆಧಾರ್ ಅಥವಾ ಡಿಜಿಲಾಕರ್ ಮೂಲಕ ಪ್ರಮಾಣೀಕರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಹೆಸರಿನಲ್ಲಿ ಆಗುತ್ತಿದ್ದ ದೋಷಗಳನ್ನು ತಪ್ಪಿಸಬಹುದಾಗಿದೆ.
ಈ ಬಾರಿ ಏಪ್ರಿಲ್ 23 ರಂದು ಬೆಳಿಗ್ಗೆ 10.30 ರಿಂದ ಭೌತ ಶಾಸ್ತ್ರ, ಮಧ್ಯಾಹ್ನ 2.30 ರಿಂದ ರಸಾಯನ ಶಾಸ್ತ್ರ, ಏಪ್ರಿಲ್ 24 ರಂದು ಬೆಳಿಗ್ಗೆ 10.30 ರಿಂದ ಗಣಿತ, ಮಧ್ಯಾಹ್ನ 2.30 ರಿಂದ ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 22 ರಂದು ಗಡಿನಾಡು, ಹೊರನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.