ಬೆಂಗಳೂರು: ರಾಜ್ಯ ಸರ್ಕಾರ ದೇವಾಲಯಗಳ ಆದಾಯದ ಮೇಲೆ 10% ತೆರಿಗೆ ವಿಧಿಸಿರುವ ಕ್ರಮದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.
ಅಧಿವೇಶನದಲ್ಲಿ ಮೊನ್ನೆಯಷ್ಟೇ ರಾಜ್ಯ ಸರ್ಕಾರ ಹಿಂದೂ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಆದಾಯದಿಂದ 10% ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಎಂದು ನಿಯಮ ಜಾರಿ ಮಾಡಿತ್ತು. ಈ ಬಗ್ಗೆ ವಿಪಕ್ಷ ಬಿಜೆಪಿ ತೀವ್ರ ಟೀಕೆ ಮಾಡಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ 1 ಕೋಟಿ ರೂ. ಗೂ ಅಧಿಕ ಆದಾಯವಿರುವ ದೇವಾಲಯಗಳಿಗೆ ಮಾತ್ರ ತೆರಿಗೆ ಅನ್ವಯವಾಗುತ್ತದೆ. ಈ ಹಣವನ್ನು ಬೇರೆ ಸಮುದಾಯದವರಿಗೆ ಬಳಕೆ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಹಾಗಿದ್ದರೂ ಇದು ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರವೇಕೆ? ಬೇರೆ ಸಮುದಾಯದ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಲ್ಲ ಯಾಕೆ ಎಂದು ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ತಮ್ಮ ವಿಫಲತೆಯನ್ನು ಮುಚ್ಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದರು. ಇದೀಗ ರಾಜ್ಯದ ಬೊಕ್ಕಸ ದಿವಾಳಿಯಾಗಿದೆ. ಇದಕ್ಕಾಗಿ ದೇವಾಲಯಗಳ ಮೇಲೆ ಕಣ್ಣು ಬಿದ್ದಿದೆ. ಈ ಬಗ್ಗೆ ಬಿಜೆಪಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದಿದ್ದಾರೆ.