Publish Date: Fri, 11 Mar 2022 (19:52 IST)
Updated Date: Fri, 11 Mar 2022 (19:54 IST)
ಮರಕ್ಕೆ ಕಾರು ಢಿಕ್ಕಿ ಹೊಡೆದ ಸಂಭವಿಸಿದ ಭೀಕರ ಅವಘಡದಲ್ಲಿ ಐವರು ಸ್ಥಳದಲ್ಲೇ ದಾರುಣವಾಗಿಮೃತಪಟ್ಟ ಘಟನೆ ಅಫಜಲಪುರ- ದುಧನಿ ನಡುವಿನ ಬಳೂರ್ಗಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರ ದತ್ತಾತ್ರೇಯ ದರ್ಶನ ಪಡೆದು ಮಹಾರಾಷ್ಟ್ರ ಕ್ಕೆ ವಾಪಸ್ಸಾಗುತ್ತಿದ್ದ ಅಹಮದ ನಗರದವರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಗಾಣಗಾಪುರದ ದತ್ತಾತ್ರೇಯನ ದರ್ಶನ ಮುಗಿಸಿಕೊಂಡು ಮರಳುವಾಗ ಅವಘಡ ಸಂಭವಿಸಿದ್ದು, ಚಾಲಕ ಸೇರಿದಂತೆ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಅಫಜಲಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಐವರ ಬದಲು ಮಕ್ಕಳು ಸೇರಿ ಒಂಭತ್ತು ಜನ ಪ್ರಯಾಣಿಸುತ್ತಿದ್ದರು.
ದೇವಲ್ ಗಾಣಗಾಪುರದಿಂದ ದತ್ತಾತ್ರೇಯ ದರ್ಶನ ಪಡೆದು ಮಹಾರಾಷ್ಟ್ರಕ್ಕೆ ವಾಪಾಸ್ ಆಗುತ್ತಿದ್ದ ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು, ಚಾಲಕ ಸೇರಿದ್ದು, ಘಟನಾ ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.