Select Your Language

Notifications

webdunia
webdunia
webdunia
webdunia

ಮಹಿಳೆಯರ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಆಪ್ ನಿಂದ ಕ್ಯಾಂಡಲ್ ಲೈಟ್ ಪ್ರೊಟೆಸ್ಟ್

ಮಹಿಳೆಯರ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಆಪ್ ನಿಂದ ಕ್ಯಾಂಡಲ್ ಲೈಟ್ ಪ್ರೊಟೆಸ್ಟ್
bangalore , ಶುಕ್ರವಾರ, 24 ಸೆಪ್ಟಂಬರ್ 2021 (21:16 IST)
ಬೆಂಗಳೂರು: ರಾಜ್ಯಾದ್ಯಂತ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಶುಕ್ರವಾರ ಸಂಜೆ ಮೊಂಬತ್ತಿ ಹಚ್ಚಿ ಪ್ರತಿಭಟನೆ ನೆಡೆಸಿತು.
 
ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಾ ಸ್ವಾಮಿ ಗೃಹ ಸಚಿವರರಾದ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ ನಂತರವೂ ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ಆಘಾತಕಾರಿ. ತಿಂಗಳಿಗೆ ಸರಾಸರಿ 42 ಮಹಿಳೆಯರ ಮೇಲೆ, ಅಂದರೆ ಪ್ರತಿದಿನ ಒಂದಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದೆ. 2018 ರಿಂದ ಈವರೆಗೆ 1759 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕೇವಲ ಆರು ಮಂದಿಗೆ ಶಿಕ್ಷೆಯಾಗಿದೆ ಎಂದು ಪೊಲೀಸ್‌ ಇಲಾಖೆಯೇ ಮಾಹಿತಿ ಬಹಿರಂಗಪಡಿಸಿದೆ. ಸಾಕ್ಷ್ಯಾಧಾರ ಸಂಗ್ರಹಿಸಲು ಪೊಲೀಸರು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅತ್ಯಾಚಾರಿಗಳು ಖುಲಾಸೆಗೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಪೊಲೀಸರಿಗೆ ದೂರು ನೀಡಲು ಬರುವ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪೊಲೀಸರು ಎಫ್‌ಐಆರ್‌ ಹಾಕಲು ಮೀನಾಮೇಷ ಎಣಿಸುತ್ತಾರೆ. ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲೂ ರಾಜಿ ಮಾಡಿಸಲು ಪೊಲೀಸರು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳ ಮುಂದೆ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಪೊಲೀಸ್‌ ಇಲಾಖೆ ಮೇಲೆ ಹಿಡಿತ ಸಾಧಿಸುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದ ಆಡಳಿತ ಪಕ್ಷದಲ್ಲಿ ಕಾಮುಕರೇ ತುಂಬಿಕೊಂಡಿದ್ದು, ಅವರಿಗೆ ಮಹಿಳೆಯರ ಮಾನರಕ್ಷಣೆಗಿಂತ ತಮ್ಮ ಮಾನ ಉಳಿದರೆ ಸಾಕಾಗಿದೆ. ಅತ್ಯಾಚಾರಿಗಳ ವಿರುದ್ಧ ಮಾತಾಡುವ ನೈತಿಕತೆಯನ್ನೇ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ ಎಂದು ಕುಶಲಾ ಸ್ವಾಮಿಯವರು ಬಿಜೆಪಿ ನಾಯಕರನ್ನು ಈ ಸಂದರ್ಭದಲ್ಲಿ  ತರಾಟೆಗೆ ತೆಗೆದುಕೊಂಡರು.
 
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಬಳಕೆಯಾಗುತ್ತಿದ್ದ 71 ಸಾಂತ್ವನ ಕೇಂದ್ರಗಳನ್ನು ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ಜನಸಂಖ್ಯೆ ಜಾಸ್ತಿಯಿರುವ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚು ದಾಖಲಾಗುವ ಬೆಂಗಳೂರಿನಲ್ಲೇ ಎಲ್ಲಾ ಸಾಂತ್ವನ ಕೇಂದ್ರಗಳು ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರದ ಯೋಜನೆಯ ಕೌಟುಂಬಿಕ ಸಲಹಾ ಕೇಂದ್ರಗಳು ನಿರುಪಯೋಗಿಯಾಗಿದ್ದು, ನೊಂದ ಮಹಿಳೆಯರಿಗೆ ಅಗತ್ಯವಿರುವ ಯಾವ ಸೇವೆಯೂ ಅಲ್ಲಿಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಲ್ಲದ ಹಾಗೂ ಬಿಜೆಪಿಯ ಏಜೆಂಟ್‌ ರೀತಿ ವರ್ತಿಸುವ ಆರ್.ಪ್ರಮೀಳಾ ನಾಯ್ಡುರವರ ನೇತೃತ್ವದಲ್ಲಿ ರಾಜ್ಯ ಮಹಿಳಾ ಆಯೋಗ ನಿಷ್ಕ್ರಿಯವಾಗಿದೆ ಎಂದು ಕುಶಲಾ ಸ್ವಾಮಿಯವರು ಬೇಸರ ವ್ಯಕ್ತಪಡಿಸಿದರು.
 
ಎಎಪಿ ಮುಖಂಡರಾದ ಸುಹಾಸಿನಿ ಫಣಿರಾಜ್‌, ಯೋಗಿತಾ ರೆಡ್ಡಿ, ವಿಜಯ್‌ ಶಾಸ್ತ್ರಿಮಠ್‌ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
light

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಬಂದ್ ಗೆ ಯಾವುದೇ ಬೆಂಬಲ ನೀಡುವುದಿಲ್ಲ: ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ ಸಿ ರಾವ್