ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ರಾಷ್ಟ್ರೀಯ ಪಕ್ಷಗಳು ಕಗ್ಗಂಟಾಗಿದೆ.
ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯ ನಾಯಕರು ಕೇಂದ್ರದ ಕದ ತಟ್ಟಿದ್ದಾರೆ. ಕೆಲ ಆಕಾಂಕ್ಷಿಗಳು ರಾಷ್ಟ್ರೀಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಶತಾಯ ಗತಯ ಟಿಕೇಟ್ ಪಡೆಯಬೇಕು ಎಂದು ಲಾಬಿ ಮಾಡುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯ ನಾಯಕರು ಕ್ಷೇತ್ರಗಳಿಗೆ ಭೇಟಿ ನೀಡಿ ಆಕಾಂಕ್ಷಿಗಳ ಪಟ್ಟಿ ಮಾಡಿದ್ದು, ಕೇಂದ್ರಕ್ಕೆ ಕಳುಹಿಸಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೇಂದ್ರದ ತೀರ್ಮಾನವೇ ಅಂತಿಮವಾಗಿದೆ.
ಇನ್ನು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಆದ್ದರಿಂದ ಅಭ್ಯರ್ಥಿ ಆಯ್ಕೆಯಲ್ಲಿ ಲೆಕ್ಕಾ ಚಾರ ಆರಂಭಿಸಿದೆ. ಪಕ್ಷ ಸಂಘಟನೆ ಮಾಡಿದವರು, ತಳಮಟ್ಟದ ಸಮಸ್ಯೆ ಅರಿತವರಿಗೆ ಟಿಕೇಟ್ ನೀಡಲು ಬಿಜೆಪಿ ತೀರ್ಮಾನಿಸಿದೆ.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸಿಂದಗಿಗೆ ನಾಜಿಯಾ ಶಕೀಲಾ ಹಾಗೂ ಹಾನಗಲ್ ಕ್ಷೇತ್ರಕ್ಕೆ ನಿಯಾಜ್ ಶೇಕ್ ಅವರಿಗೆ ಟಿಕೇಟ್ ನೀಡಿದ್ದು, ಇದೀಗ ರಾಷ್ಟ್ರೀಯ ಪಕ್ಷಗಳು ಮಾತ್ರ ಅಭ್ಯರ್ಥಿ ಗಳನ್ನು ಘೋಷಿಸಬೇಕಿದೆ.