Publish Date: Mon, 04 Nov 2019 (15:02 IST)
Updated Date: Mon, 04 Nov 2019 (15:05 IST)
ಹೊಸಕೋಟೆ : ಹೊಸಕೋಟೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಿಎಂ ಯಡಿಯೂರಪ್ಪ ತಮ್ಮ ಪಕ್ಷದ ನಾಯಕರಾದ ಬಚ್ಚೇಗೌಡ ಹಾಗೂ ಅವರ ಪುತ್ರ ಶರತ್ ಬಚ್ಚೇಗೌಡರ ಹೆಸರು ಹೇಳದೆ ಅವರ ಬದ್ಧ ವೈರಿ ಎಂಟಿಬಿ ನಾಗರಾಜ್ ಬಗ್ಗೆ ಹಾಡಿಹೊಗಳಿದ್ದಾರೆ.
ಇಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕ್ಷೇತ್ರವಾದ ಹೊಸಕೋಟೆಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿ ಮಾತನಾಡುವಾಗ ಎಲ್ಲರ ಹೆಸರು ಪ್ರಸ್ತಾಪಿಸಿದ ಸಿಎಂ ಬಚ್ಚೇಗೌಡ ಹಾಗೂ ಅವರ ಪುತ್ರ ಶರತ್ ಬಚ್ಚೇಗೌಡರ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಲಿಲ್ಲ.
ಅಲ್ಲದೇ ಕ್ಷೇತ್ರದ ಶಾಸಕರಾದ ಎಂಟಿಬಿ ನಾಗರಾಜ್ ಬಗ್ಗೆ ಮಾತನಾಡಿದ ಸಿಎಂ, ಎಂಟಿಬಿ ಸರಳ ಸಜ್ಜನಿಕೆಯ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವರಾಗಿದ್ದವರು ರಾಜೀನಾಮೆ ನೀಡಿದ್ದಾರೆ ಎಂದು ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿದ್ದ ಅಧಿಕಾರಿಗಳಿಗೆ ಎಂಟಿಬಿ ನಾಗರಾಜ್ ಅವರು ಹೇಳಿದ ಯಾವುದೇ ಕೆಲಸವಿದ್ದರೂ ನನ್ನ ಬಳಿ ಬನ್ನಿ , ಕೂಡಲೇ ಮಂಜೂರು ಮಾಡುತ್ತೇನೆ ಎಂದು ಸೂಚನೆ ನೀಡಿದ್ದಾರೆ.