Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆಷ್ಟು ದಿನ ಜೀವ ಇರುತ್ತೋ ಗೊತ್ತಿಲ್ಲ: ಬಿವೈ ವಿಜಯೇಂದ್ರ ವಾಗ್ದಾಳಿ

BY Vijayendra

Krishnaveni K

ಬೆಂಗಳೂರು , ಗುರುವಾರ, 4 ಜುಲೈ 2024 (14:13 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಇನ್ನೆಷ್ಟು ದಿನ ಜೀವ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಅರಮನೆ ಮೈದಾನದ ಗೇಟ್ ನಂ.3, ವೈಟ್ ಪೆಟಲ್ಸ್‍ನಲ್ಲಿ ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬುತ್ತಿದೆ. ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಸರಕಾರಕ್ಕೆ ಅಸ್ಥಿರತೆ ಕಾಡುತ್ತಿದೆ. ಕಾಂಗ್ರೆಸ್ ಒಳಜಗಳ ಮಿತಿ ಮೀರಿದೆ. ಹಾದಿ ಬೀದಿ ಹೊಡೆದಾಟ ಮುಂದುವರೆದಿದೆ. ಸಿಎಂ ಸ್ಥಾನಕ್ಕಾಗಿ ಕೂಗು, ಉಪ ಮುಖ್ಯಮಂತ್ರಿಗಾಗಿ ಕೂಗು, ಅಭಿವೃದ್ಧಿಗಾಗಿ ಹಣ ಕೇಳಿ ಕೂಗು ಕೇಳಿಸುತ್ತಿದೆ ಎಂದು ವಿಶ್ಲೇಷಿಸಿದರು.

ನರೇಂದ್ರ ಮೋದಿಜೀ ಅವರು 3ನೇ ಬಾರಿಗೆ ಅಧಿಕಾರಕ್ಕೆ ಏರಿದ್ದಾರೆ. ಇದು ದೇಶದ ಕಾರ್ಯಕರ್ತರ ಪರಿಶ್ರಮದ ಫಲ; ಇದೊಂದು ಐತಿಹಾಸಿಕ ಗೆಲುವು ಎಂದರು. ಇಂಡಿ ಒಕ್ಕೂಟ ಪೊಳ್ಳು ಭರವಸೆ ಮೂಲಕ ಅಧಿಕಾರ ಪಡೆಯಲು ಯತ್ನಿಸಿತ್ತು. ಆದರೆ, ಪ್ರಜ್ಞಾವಂತ ಮತದಾರರು ಅವರ ಷಡ್ಯಂತ್ರವನ್ನು ಬೆಂಬಲಿಸಲಿಲ್ಲ ಎಂದು ತಿಳಿಸಿದರು. ಮಾನ್ಯ ನಡ್ಡಾಜೀ, ಅಮಿತ್ ಶಾ ಅವರ ನೇತೃತ್ವದಲ್ಲಿ ಇದು ಐತಿಹಾಸಿಕ ಜಯಭೇರಿ ಎಂದು ಹೆಮ್ಮೆಯಿಂದ ನುಡಿದರು.
 
ಅಧಿಕಾರ ದರ್ಪ, ಅಧಿಕಾರ ದುರುಪಯೋಗದಿಂದ 18ರಿಂದ 20 ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಸರಕಾರಕ್ಕೆ ನಮ್ಮ ಕಾರ್ಯಕರ್ತರು ಪಾಠ ಕಲಿಸಿದ್ದಾರೆ. ಅವರ ಪರಿಶ್ರಮದಿಂದ, ದಬ್ಬಾಳಿಕೆ ನಡುವೆ ಎನ್‍ಡಿಎ 19 ಸಂಸದರನ್ನು ಗೆದ್ದಿದೆ. ಅದರ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಹೇಳಿದರು. ಕರ್ನಾಟಕದ ಪೊಳ್ಳು ಭರವಸೆ, ಒಡೆದಾಳುವ ನೀತಿ, ತುಷ್ಟೀಕರಣದ ಕಾಂಗ್ರೆಸ್ ಸರಕಾರದ ನೀತಿಯನ್ನು ಜನರು ಧಿಕ್ಕರಿಸಿ ನಮಗೆ ಬೆಂಬಲ ನೀಡಿದ್ದಾರೆ. ಫಟಾಪಟ್ ಸುಳ್ಳಿನ ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಮತ ಪ್ರಮಾಣ ಹೆಚ್ಚಾಗಿದೆ. 9 ಸಂಸದರನ್ನು ಗೆದ್ದಿದ್ದಾಗಿ ತಮ್ಮ ಬೆನ್ನು ತಟ್ಟಲು ಕಾಂಗ್ರೆಸ್ ಸರಕಾರ ಮುಂದಾಗಿದೆ. ಬಿಜೆಪಿ-ಜೆಡಿಎಸ್ 142ರಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್ ಪಡೆದಿದೆ. ಇದನ್ನು ಕಾಂಗ್ರೆಸ್ಸಿನ ಸಿಎಂಗೆ ನೆನಪು ಮಾಡುವುದಾಗಿ ಹೇಳಿದರು.

ಬಿಜೆಪಿ ಹಿಂದೆ ರಾಜ್ಯದಲ್ಲಿ ಜನಪರ ಯೋಜನೆಗಳನ್ನು ಕೊಟ್ಟಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಸುಳ್ಳು ಆರೋಪ ಮಾಡಿ ಚುನಾವಣೆ ಎದುರಿಸಿತ್ತು. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವು ಜನರ ಭರವಸೆಗಳನ್ನು ನುಚ್ಚುನೂರು ಮಾಡಿದೆ. ಗ್ಯಾರಂಟಿಗಳ ಮೂಲಕ ಒಳಿತು ಮಾಡುವುದಾಗಿ ಹೇಳಿದ ಕಾಂಗ್ರೆಸ್, ಭ್ರಷ್ಟಾಚಾರರಹಿತ ಆಡಳಿತದ ಭರವಸೆ ಕೊಟ್ಟಿತ್ತು. ಇವರ ಆಡಳಿತವೈಖರಿ, ಹಿಂದೆಂದೂ ಕಾಣದ ಭ್ರಷ್ಟಾಚಾರದ ಹಗರಣ ಹೊರಬರುತ್ತಿದೆ. ಇವರ ಮುಖವಾಡ ಕಳಚಿಬಿದ್ದಿದೆ ಎಂದರು.
 
ನಾಯಿ ಬಾಲ ಡೊಂಕು ಎಂಬಂತೆ..
ನಾಯಿ ಬಾಲ ಡೊಂಕು ಎಂಬಂತೆ ಪರಿಸ್ಥಿತಿ ಕಾಂಗ್ರೆಸ್ಸಿನದು. ವಾಲ್ಮೀಕಿ ನಿಗಮದಲ್ಲಿ ದಲಿತ ಸಮುದಾಯದ ಅನುಕೂಲಕ್ಕಾಗಿ ಕೊಟ್ಟ ಹಣವನ್ನು ಭ್ರಷ್ಟಾಚಾರಕ್ಕೆ ಬಳಸಿದ್ದಾರೆ. ಮೈಸೂರಿನ ಮೂಡಾ ಹಗರಣದಲ್ಲಿ ಸಿಎಂ ಕುಟುಂಬದವರ ಹೆಸರು ಕೇಳಿಬರುತ್ತಿದೆ. ಇದು ಸುಮಾರು 3ರಿಂದ 4 ಸಾವಿರ ಕೋಟಿ ಮೊತ್ತದ್ದು. ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಜನವಿರೋಧಿ ಸರಕಾರ ಆಡಳಿತ ನಡೆಸುತ್ತಿದೆ ಎಂದು ವಿಜಯೇಂದ್ರ ಅವರು ಟೀಕಿಸಿದರು.
 
ಬಿಜೆಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಅವರು ಖಂಡಿಸಿದರು. ರಾಮೇಶ್ವರಂ ಕೆಫೆ ಸ್ಫೋಟ, ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಪ್ರಕರಣವನ್ನು ಉಲ್ಲೇಖಿಸಿದರು. 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರ ಕೊಟ್ಟ ಪರಿಹಾರ ಹಣವನ್ನು ಸರಿಯಾಗಿ ನೀಡಿಲ್ಲ ಎಂದು ಆಕ್ಷೇಪಿಸಿದರು. ಇದು ರೈತ ವಿರೋಧಿ ಸರಕಾರ ಎಂದು ದೂರಿದರು. ಮೇಕೆÀದಾಟು ಯೋಜನೆ ಪಾದಯಾತ್ರೆ, ಹೋರಾಟವನ್ನು ಪ್ರಸ್ತಾಪಿಸಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆ ಯೋಜನೆಗೆ ಒಂದೇ ಒಂದು ರೂಪಾಯಿಯನ್ನೂ ಮೀಸಲಿಟ್ಟಿಲ್ಲವೇಕೆ ಎಂದು ಕೇಳಿದರು.

ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಭಾಷಣವನ್ನೂ ಅವರು ಪ್ರಸ್ತಾಪಿಸಿದರು. ಅವರು ಹಿಂದೂಗಳ ತೇಜೋವಧೆ, ಅವಮಾನ ಮಾಡಿದ್ದಾರೆ. ಜಮೀರ್ ಅಹ್ಮದ್ ಎಂಬ ಬೇಜವಾಬ್ದಾರಿ ಸಚಿವರಿದ್ದು, ಅವರ ಮಾತಿನಲ್ಲೂ ಅಹಂಕಾರದ ಹೇಳಿಕೆ ಇದೆ ಎಂದು ಖಂಡಿಸಿದರು.
ಲೂಟಿ ಮಾಡುವ, ಅಭಿವೃದ್ಧಿ ಶೂನ್ಯ ಸರಕಾರ ಇಲ್ಲಿದೆ. ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಶಾಲೆ ಮಕ್ಕಳು ಓಡಾಟಕ್ಕೆ ಬಸ್ ಇಲ್ಲದೆ ಪರದಾಡುವಂತಾಗಿದೆ. ಬಂಡವಾಳ ಹೂಡಿಕೆ ಶೂನ್ಯ ಎಂಬ ಸ್ಥಿತಿಗೆ ತಲುಪಿದೆ ಎಂದು ವಿವರಿಸಿದರು. ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಏರಿಕೆ ಸೇರಿ ಎಲ್ಲ ದರ ಏರಿಕೆ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರಕಟಿಸಿದರು. ಅಧಿವೇಶನದಲ್ಲಿ ಜನವಿರೋಧಿ ಸರಕಾರದ ಕಿವಿ ಹಿಂಡಲಿದ್ದೇವೆ ಎಂದರು.

ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ನರೇಂದ್ರ ಮೋದಿಜೀ ಅವರು ಸತತ 3ನೇ ಬಾರಿ ಪ್ರಧಾನಿಯಾಗಿದ್ದು, ಎನ್‍ಡಿಎ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲೂ ಬಿಜೆಪಿ- ಜೆಡಿಎಸ್ ಕೂಟ 19 ಸ್ಥಾನಗಳನ್ನು ಗೆದ್ದಿದೆ ಎಂದು ಸಂತಸ ವ್ಯಕ್ತಪಡಿಸಿದರು. 142 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಈಗ ಚುನಾವಣೆ ನಡೆದರೆ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಏರುವುದು ಖಚಿತ ಎಂದು ವಿಶ್ವಾಸದಿಂದ ನುಡಿದರು. ಮತದಾರ ಬಂಧುಗಳಿಗೆ ಕೃತಜ್ಞತೆ ಸಮರ್ಪಿಸಿದರು.

ರಾಜ್ಯ ಸರಕಾರ ದಿವಾಳಿಯತ್ತ ನಡೆದಿದೆ. ಅನುಪಯುಕ್ತ ಗ್ಯಾರಂಟಿಗಳ ಕಾರಣಕ್ಕೆ ಬೆಲೆ ಏರಿಕೆ ನಿರಂತರವಾಗಿ ಮುಂದುವರೆದಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷವು 17 ಸಚಿವರ ಸ್ವಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದೆ. ಅದು ಜನಪ್ರಿಯತೆ ಕಳೆದುಕೊಂಡಿದ್ದು, ಅವನತಿಯತ್ತ ಸಾಗುತ್ತಿದೆ; ಜನಹಿತ ಮರೆತಿದ್ದು, ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಅದಕ್ಕಿಲ್ಲ ಎಂದು ತಿಳಿಸಿದರು. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಹೋರಾಟ ಮಾಡಲು ಕರೆ ನೀಡಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದರು.
 
ಐತಿಹಾಸಿಕ ಗೆಲುವಿಗೆ ಧನ್ಯವಾದ...
ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರ್‍ವಾಲ್ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಐತಿಹಾಸಿಕ ಗೆಲುವಿಗಾಗಿ ಧನ್ಯವಾದ ಸಮರ್ಪಿಸಿದರು. ಕಾರ್ಯಕರ್ತರ ಪ್ರಯತ್ನ, ಸಮರ್ಪಣಾ ಮನೋಭಾವದ ಕಾರಣ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. 2023ರಲ್ಲಿ ಆದ ಅಪಮಾನಕ್ಕೆ ಬದಲಿಯಾಗಿ ಈ ಗೆಲುವನ್ನು ನೀಡಿದ್ದೀರಿ ಎಂದು ಅಭಿನಂದಿಸಿದರು.

ಕಾಂಗ್ರೆಸ್ 136 ಶಾಸಕರನ್ನು ಹೊಂದಿದ್ದರೂ ದಯನೀಯ ಸೋಲು ಅನುಭವಿಸಿದೆ. ರಾಜ್ಯ ಸರಕಾರದ ವಿರುದ್ಧ ಜನರು ಮತ ನೀಡಿದ್ದಾರೆ. ಕಾಂಗ್ರೆಸ್‍ಗೆ ಐತಿಹಾಸಿಕ ಪರಾಜಯಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಸರಕಾರ ಸೋತಿದೆ. ಮತ್ತೆ ಚುನಾವಣೆ ನಡೆಸಿಕೊಡಲು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಸಂಪೂರ್ಣ ಸೋಲು ಒಪ್ಪಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಭ್ರಷ್ಟಾಚಾರದ ಕಾರಣಕ್ಕೆ ಕಾಂಗ್ರೆಸ್ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈ ಸಂಬಂಧ ಪ್ರತಿಭಟನೆ ಸಂಘಟಿಸಿದ ವಿಜಯೇಂದ್ರರ ತಂಡಕ್ಕೆ ಅಭಿನಂದನೆಗಳು ಎಂದು ರಾಧಾಮೋಹನ್‍ದಾಸ್ ಅಗರ್‍ವಾಲ್ ಅವರು ತಿಳಿಸಿದರು. ಮೈಸೂರು ಮೂಡಾದ 4 ಸಾವಿರ ಕೋಟಿಯ ಹಗರಣವನ್ನೂ ಅವರು ಪ್ರಸ್ತಾಪಿಸಿದರು. ಇದರ ವಿರುದ್ಧ ತೀವ್ರ ಹೋರಾಟ ನಡೆಸಲು ಸೂಚಿಸಿದರು. 3ನೇ ಬಾರಿ ಬಿಜೆಪಿ ತನ್ನ ಮತಪ್ರಮಾಣವನ್ನು ಹೆಚ್ಚಿಸಿಕೊಂಡು ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಅಧಿಕಾರ ಪಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು. 14 ರಾಜ್ಯಗಳಲ್ಲಿ ಕಾಂಗ್ರೆಸ್ ಸಂಸದರೇ ಇಲ್ಲ ಎಂದು ವಿವರ ನೀಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಆದ್ಯತೆ ಮೇರೆಗೆ ಅಪೂರ್ಣ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ