Publish Date: Fri, 09 Oct 2026 (16:07 IST)
Updated Date: Fri, 09 Oct 2026 (16:11 IST)
ವಿಜಯಪುರ: ತೀವ್ರ ಬರದಿಂದ ತತ್ತರಿಸಿರುವ ರಾಜ್ಯದ ರೈತರ ನೆರವಿಗೆ ಬಾರದ ಸರ್ಕಾರ ಕೇವಲ ರಿಯಲ್ ಎಸ್ಟೇಟ್, ಟೌನ್‍ಶಿಪ್ ಮಾಡುವುದರಲ್ಲೇ ಮುಳುಗಿದೆ. ಸರ್ಕಾರ ದಿವಾಳಿಯಾಗಿದ್ದು, ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹಣಕಾಸಿನ ಸ್ಥಿತಿ ಅಧೋಗತಿಗೆ ಹೋಗಿದೆ. ಅನ್ನದಾತರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುಕಾಲು ವರ್ಷವಾಗಿದೆ. ಆದರೆ ಅವರು ಹೇಳಿಕೊಳ್ಳುವಂತೆ ನುಡಿದಂತೆ ನಡೆಯದೆ ಕೇವಲ ಜಾಹೀರಾತು ನೀಡಿ ಪ್ರಚಾರದಲ್ಲಿ ತೊಡಗಿದೆ. ಒಂದೇ ಒಂದು ಹೊಸ ಯೋಜನೆ ಜಾರಿ ಮಾಡಲಿಲ್ಲ. ಶಾಸಕರ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಲಿಲ್ಲ. ಎರಡೂವರೆ ಲಕ್ಷ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಲಿಲ್ಲ. ಉದ್ಯೋಗಾವಕಾಶ ಸಿಗದೆ ಯುವ ಜನತೆ ಧಂಗೆ ಏಳುವ ಸ್ಥಿತಿಗೆ ಬಂದಿದ್ದಾರೆ ಎಂದು ದೂರಿದರು.
ರೈತ ವಿರೋಧಿ ನೀತಿಗಳಿಂದ ಸಂಕಷ್ಟ
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಪೀಡಿತ ರೈತರಿಗೆ ಪ್ರತಿ ಹೆಕ್ಟೇರ್‍ಗೆ 50 ಸಾವಿರ ಪರಿಹಾರ, 5 ಲಕ್ಷದವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ವಿಶೇಷ ಅಧಿವೇಶನದಲ್ಲಿ ಆಗ್ರಹ ಮಾಡಿದ್ದೇವು. ಆದರೆ ಸರ್ಕಾರ ಕೇವಲ ಎರಡೂವರೆ ಸಾವಿರ ಕೊಡುವ ಘೋಷಣೆ ಮಾಡಿಕೊಂಡು ಸುಮ್ಮನೆ ಕುಳಿತಿದೆ ಎಂದರು.
ಪ್ರತಿ ದಿನ ತ್ರಿ ಫೇಸ್ ಎಂಟು ಗಂಟೆ ವಿದ್ಯುತ್ ರೈತರಿಗೆ ಬೇಕಾಗಿದೆ. ಅದನ್ನೂ ಸರ್ಕಾರ ಕೊಡಲಿಲ್ಲ. ಸರ್ಕಾರದ ಇಂತಹ ಧೋರಣೆಯಿಂದ ಜನರು ಬೇಸತ್ತು. ಆತ್ಮಸ್ಥೈರ್ಯ ಕಳೆದುಕೊಂಡ ರೈತ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಟೌನ್‍ಶಿಪ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಕಡೆಗೆ ಮಾತ್ರವೇ ಆಸಕ್ತಿ. ರೈತರ ಬಗ್ಗೆ ಕಿಂಚಿತೂ ಕಾಳಜಿ ಇಲ್ಲದಿರಿವುದು ದುರ್ದೈವ. ನಾನು ಪ್ರಜಾಸೇವಕ ಎಂದು ಸಿಎಂ ಹೇಳಿಕೊಂಡರೆ ಸಾಲದು. ಜನರ ಬಗ್ಗೆ ಕಾಳಜಿಯೂ ಇರಬೇಕು ಎಂದು ಒತ್ತಾಯಿಸಿದರು.
ನೆರೆಯ ಮಹಾರಾಷ್ಟ್ರದಲ್ಲಿ ಎರಡು ಲಕ್ಷದವರೆಗೆ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಇದೇ ರೀತಿ ಕರ್ನಾಟಕದಲ್ಲೂ ಸರ್ಕಾರ ಮಾಡಲಿ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಜಾರಿ ಮಾಡಿ ಎಂದು ಹೇಳಿದರೆ ಸರ್ಕಾರ ನಿರ್ಲಕ್ಷ್ಯ ಮಾಡಿತು. ಹೈನುಗಾರಿಕೆಗೂ ಪ್ರೋತ್ಸಾಹ ಧನ ನೀಡಲಿಲ್ಲ. ಆದ್ದರಿಂದ ಮಹಾರಾಷ್ಟ್ರ ಸರ್ಕಾರದಂತೆ ನಮ್ಮ ರಾಜ್ಯ ಸರ್ಕಾರವು ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ಬಿಜೆಪಿಯ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಜನ ಬರದಿಂದ ಇಷ್ಟೊಂದು ಕಷ್ಟದಲ್ಲಿದ್ದರೆ ಮುಖ್ಯಮಂತ್ರಿ ಮಾತ್ರ ಯಾವುದೇ ಚಿಂತೆ ಇಲ್ಲದೆ ಇದ್ದಾರೆ. ರೈತರ ಸಮಸ್ಯೆ ಅರ್ಥಮಾಡಿಕೊಳ್ಳಿ ಎಂದು ನಾವು ಕೇಳಿದರೆ ಸಿಎಂ ಹೆಲಿಕಾಪ್ಟರ್‍ನಲ್ಲಿ ಬಂದು ಬರ ವೀಕ್ಷಣೆ ಮಾಡಿದರು ಎಂದು ಆರೋಪಿಸಿದರು.
ವಯನಾಡಿನಲ್ಲಿ ರಾಹುಲ್ ಗಾಂಧಿ ಖುಷಿಪಡಿಸಲು ರಾಜ್ಯದ ತೆರಿಗೆ ಹಣವನ್ನು ನೀಡಿದ್ದ ಮುಖ್ಯಮಂತ್ರಿಗಳು ಈಗ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ಎರಡು ಟಿಎಂಸಿ ನೀರು ಬಿಡಲು ಮೌಖಿಕ ಆದೇಶ ನೀಡಿದ್ದಾರೆ. ಏಕೆಂದರೆ ಸಿಎಂ ಪರಮಾಪ್ತ ತೆಲಂಗಾಣದಲ್ಲಿ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿಗಳ ವ್ಯವಹಾರದ ಆಸಕ್ತಿಯೂ ಸಹ ತೆಲಂಗಾಣದಲ್ಲಿ ಇದೆ. ಅದಕ್ಕೆ ನೀರು ಬಿಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ನಮ್ಮ ರಾಜ್ಯದಲ್ಲೇ ನೀರಿಗೆ ಹಾಹಾಕಾರ ಇದೆ. ಆದರೆ ತಮ್ಮ ಸ್ನೇಹಿತನನ್ನು ಖುಷಿಪಡಿಸಲು ನೀರು ಬಿಡುವುದು ಅಕ್ಷಮ್ಯ ಅಪರಾಧ ಎಂದು ವಿಶ್ಲೇಷಿಸಿದರು.
ಎಸ್‍ಐಆರ್ ವಿಚಾರದಲ್ಲೂ ರಾಹುಲ್ ಗಾಂಧಿ ಖುಷಿ ಪಡಿಸಲು ಫಾರಂ 7 ನೆಪ ಮಾಡಿಕೊಂಡು ಮುಖ್ಯಮಂತ್ರಿಗಳು ರಾಜ್ಯ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿದರು. ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡ್ತಾ ಇದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದರು.
ತಮ್ಮ ಕುರ್ಚಿಯನ್ನು ತಮ್ಮದೇ ಶಾಸಕರು ಅಲ್ಲಾಡಿಸುತ್ತಿದ್ದಾರೆ ಎಂಬ ಆತಂಕ ಸಿಎಂಗೆ ಕಾಡುತ್ತಿದೆ. ಅದಕ್ಕೆ ನಮ್ಮ ಮೇಲೆ ಆರೋಪ ಮಾಡ್ತಾ ಇದ್ದಾರೆ. ನಿಮ್ಮ ಸರ್ಕಾರ ಬೀಳಿಸುವ ಅವಶ್ಯಕತೆ ಇಲ್ಲ. ಸರ್ಕಾರವನ್ನು ಜನರೇ ಮನೆಗೆ ಕಳಿಸುತ್ತಾರೆ. ಬಿಪಿಎಲ್ ಕಾರ್ಡ್ ಗೆ ತಡೆ ನೀಡಿದ್ದಾರೆ. ಮಾಸಾಶನ ನಿಲ್ಲಿಸಿದ್ದಾರೆ. ಮನೆ ನೀಡಿಲ್ಲ. ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ಕೋಟಿ ಕೋಟಿ ಘೋಷಣೆ ಮಾಡ್ತಾ ಇದ್ದಾರೆ. ವೇತನಕ್ಕೂ ಸರ್ಕಾರದಲ್ಲಿ ಹಣ ಇಲ್ಲ. ಸಾರಿಗೆ ನಿಗಮದಲ್ಲಿ ಹಣ ಇಲ್ಲದೆ ಬಸ್‍ಗಳು ಡಿಪೋದಲ್ಲೇ ನಿಂತಿವೆ. ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ. ಒಟ್ಟಾರೆ ಸರ್ಕಾರ ದಿವಾಳಿಯಾಗಿ ಆರ್ಥಿಕ ತುರ್ತುಸ್ಥಿತಿ ಎದುರಿಸುತ್ತಿದೆ ಎಂದು ಹೇಳಿದರು.
ಸರ್ಕಾರ ಇಷ್ಟೊಂದು ವೈಫಲ್ಯಗಳನ್ನು ಎದುರಿಸುತ್ತಿದ್ದರೂ ಮರೆಮಾಚಲು ಸಾಂವಿಧಾನಿಕ ಸಂಸ್ಥೆಗಳ ಮೇಲೆ, ಬಿಜೆಪಿ ಮೇಲೆ ಸಿಎಂ ಆರೋಪ ಮಾಡ್ತಾ ಇದ್ದಾರೆ. ಈ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಜಿಲ್ಲಾ ಸಹಕಾರ ಬ್ಯಾಂಕ್‍ಗಳಿಂದ ರೈತರಿಗೆ ಸಾಲ ಮರುಪಾವತಿಗೆ ನೋಟಿಸ್ ನೀಡುತ್ತಾ ಇದ್ದಾರೆ. ಬಲವಂತದ ಸಾಲ ವಸೂಲಿ ಮಾಡಲ್ಲ ಅಂತ ಸಿಎಂ ಹೇಳಿದ್ದರು. ಆದರೂ ಬ್ಯಾಂಕ್‍ನವರು ನೋಟಿಸ್ ನೀಡುತ್ತಾರೆ ಎಂದರೆ ಸಿಎಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂಬುದು ಜಗಜ್ಜಾಹೀರಾಗಿದೆ ಎಂದರು.
ರಾಜ್ಯದ ಸಾಲ ಒಂಬತ್ತೂವರೆ ಲಕ್ಷ ಕೋಟಿಗೆ ಹೋಗಿದೆ. ಆಡಳಿತ, ಕಾನೂನು ಸುವ್ಯವಸ್ಥೆ ಸಹ ಹದಗೆಟ್ಟಿದೆ. ಗಾಂಜಾ, ಅಫೀಮು ಧಂದೆ ಹೆಚ್ಚಳವಾಗಿದೆ. ದಲಿತರ ಹತ್ಯೆ ಹೆಚ್ಚಳವಾಗಿದೆ. ಆದರೂ ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಸಂಪುಟ ಸಭೆಯಲ್ಲಿ ಲಂಚ ಪಡೆಯುವಾಗ ಎಚ್ಚರವಹಿಸಿ, ಬಿಜೆಪಿಯವರು ಟ್ರ್ಯಾಪ್ ಮಾಡ್ತಿದ್ದಾರೆ ಎಂದು ಸಿಎಂ ಸಹೋದ್ಯೋಗಿಗಳಿಗೆ ಹೇಳಿದ್ದಾರೆ. ಈ ಸರ್ಕಾರದ ಬಗ್ಗೆ ಜನರಿಗೆ ಭರವಸೆ ಇಲ್ಲ ಎಂದು ಹೇಳಿದರು.
ಎಸ್‍ಐಆರ್‍ನಲ್ಲಿ ಒಂದೇ ಸಮುದಾಯವನ್ನು ಗುರಿ ಮಾಡಿ ಬಿಜೆಪಿ ಕೆಲಸ ಮಾಡುತ್ತಿಲ್ಲ. ನ್ಯಾಯಯುತವಾಗಿ ಎಸ್‍ಐಆರ್ ನಡೆಯಬೇಕು ಎಂಬುದೇ ನಮ್ಮ ಉದ್ದೇಶ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷ ಸಂಘಟನೆಯಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸುತ್ತೇವೆ. ಹಳೆ ಕಾರ್ಯಕರ್ತರನ್ನು ಜೊತೆಗೆ ಕೊಂಡೊಯ್ಯುತ್ತೇವೆ
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ