Select Your Language

Notifications

webdunia
webdunia
webdunia
Tuesday, 1 April 2025
webdunia

ಇಂತಹದ್ದೊಂದು ದಟ್ಟ ದರಿದ್ರ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಗುರುವಾರ, 20 ಮಾರ್ಚ್ 2025 (15:01 IST)
ಬೆಂಗಳೂರು: ರಾಜ್ಯದಲ್ಲಿ ದರಿದ್ರ, ಜನವಿರೋಧಿ, ಕೆಟ್ಟ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ನಾಡಿನ ಜನತೆಗೆ ಕೊಟ್ಟ ಏಕೈಕ ಗ್ಯಾರಂಟಿ ಎಂದರೆ ಅದು ಬೆಲೆ ಏರಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಬೆಲೆ ಏರಿಕೆಯ ಗ್ಯಾರಂಟಿಯನ್ನು ಈ ರಾಜ್ಯ ಸರಕಾರ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ವಿಫಲವಾಗಿದೆ. ಬೆಲೆ ಏರಿಕೆಯಿಂದ ನಾಡಿನ ಸಾಮಾನ್ಯ ಜನರು, ಬಡವರು, ರೈತರು ಸೇರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ ಎಂದು ತಿಳಿಸಿದರು.
 
ಇವರ ಹುಳುಕನ್ನು ಮುಚ್ಚಿ ಹಾಕಲು ಪದೇಪದೇ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ಕಡೆ ಪುಕ್ಕಟೆ ವಿದ್ಯುತ್ ಎನ್ನುತ್ತಾರೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. 3 ಫೇಸ್ ವಿದ್ಯುತ್ತನ್ನು 7 ತಾಸು ಕೊಡಲು ಸರಕಾರಕ್ಕೆ ಆಗುತ್ತಿಲ್ಲ. ಮತ್ತೊಂದು ಕಡೆ ಪಿಡಬ್ಲ್ಯುಡಿ ಮತ್ತಿತರ ಇಲಾಖೆಗಳು 6500 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆ ಬರೆ ಎಳೆಯುವ ಸರಕಾರದ ಕ್ರಮ ಅಕ್ಷಮ್ಯ ಅಪರಾಧ. ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.
ಪ್ರಶ್ನೆಗೆ ಉತ್ತರ ನೀಡಿದ ಅವರು, ಸ್ಮಾರ್ಟ್ ಮೀಟರ್, ವಿದ್ಯುತ್ ದರ ಏರಿಕೆ, ಮೆಟ್ರೋ ದರ ಮತ್ತಿತರ ಬೆಲೆ ಏರಿಕೆ ಮತ್ತಿತರ ವಿಚಾರವನ್ನು ಚರ್ಚಿಸಲು ಸರಕಾರಕ್ಕೆ ಪುರುಸೊತ್ತಿಲ್ಲ; ಅಲ್ಪಸಂಖ್ಯಾತರ ಓಲೈಕೆ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಮೇಕೆ ದಾಟು ಎಂದು ತಿಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಏನ್ಮಾಡಿದ್ದಾರೆಂದು ಡಿ.ಕೆ.ಶಿವಕುಮಾರರನ್ನು ಪ್ರಶ್ನಿಸಬೇಕಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅಧಿಕಾರದ ಮದ, ಭ್ರಮೆ ಇವರ ನೆತ್ತಿಗೇರಿದೆ. ಹೇಳಿ ಕೇಳಿ ಡಿ.ಕೆ.ಶಿವಕುಮಾರ್ ಅವರು ದೇಶದ ಎರಡನೇ ಅತಿ ಶ್ರೀಮಂತ ಶಾಸಕ ಎಂದು ವ್ಯಂಗ್ಯವಾಡಿದರು.
 
ಇದು ಪಿಕ್ ಪಾಕೆಟ್ ಸರಕಾರ
ಸಾರ್ವತ್ರಿಕ ಚುನಾವಣೆಯಲ್ಲಿ ಜನರ ಕಿವಿಗೆ ಹೂವು ಮುಡಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು ಜನರಿಗೆ ಮೋಸ, ವಂಚನೆ ಮಾಡುತ್ತಿದ್ದಾರೆ. ನಾಡಿನ ಜನರು ಎಚ್ಚತ್ತುಕೊಳ್ಳಬೇಕಿದೆ. ಇದು ಪಿಕ್ ಪಾಕೆಟ್ ಸರಕಾರ. ಒಂದೆಡೆ ಗ್ಯಾರಂಟಿ ಕೊಡುವುದಾಗಿ ಹೇಳಿಕೊಂಡು ಜನಸಾಮಾನ್ಯರಿಗೆ ಹೊರೆ ಹಾಕುತ್ತಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
 
ಮುಸಲ್ಮಾನರಿಗೆ ಸರಕಾರಿ ಗುತ್ತಿಗೆಗಳು, ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ಮಸೂದೆ ಸದನದಲ್ಲಿ ತರುತ್ತಿದ್ದಾರೆ. ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು. ಇದು ಕಾಂಗ್ರೆಸ್ ಸರಕಾರವೇ? ಸಿದ್ದರಾಮಯ್ಯರ ಸರಕಾರವೇ ಅಥವಾ ನಿಜಾಮರ ಆಡಳಿತವೇ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ ಎಂದು ತಿಳಿಸಿದರು. ಮುಸಲ್ಮಾನರ ಓಲೈಕೆ ಮತ್ತು ರಾಜ್ಯದ ಹಿಂದೂಗಳಿಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯರ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
 
ಹಿಂದಿನ ಅವರ ಅವಧಿಯಲ್ಲಿ ಶಾದಿ ಭಾಗ್ಯ ತಂದಿದ್ದಲ್ಲದೆ, ಟಿಪ್ಪು ಜಯಂತಿ ತಂದಿದ್ದರು. ಈಗ ವಕ್ಫ್ ಬಿಲ್ ದುರುಪಯೋಗ ಪಡಿಸಿಕೊಂಡು ಲಕ್ಷ- ಕೋಟಿ ಮೌಲ್ಯದ ಜಮೀನನ್ನು ಕಬಳಿಸುವ ಕೆಲಸಕ್ಕೆ ಕಾಂಗ್ರೆಸ್ ಪುಡಾರಿಗಳು ಹೊರಟಿದ್ದಾರೆ. ಅವರ ರಕ್ಷಣೆಗೆ ರಾಜ್ಯ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು. ಹಿಂದೂಗಳಿಗೆ ಮಾಡುವ ಅವಮಾನಕ್ಕೆ ಇವರು ಬೆಲೆ ತೆರಲೇಬೇಕಾಗುತ್ತದೆ ಎಂದು ಎಚ್ಚರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಛತ್ತೀಸ್‌ಗಢ: ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ 22ನಕ್ಸಲರ ಹತ್ಯೆ, ಓರ್ವ ಭದ್ರತಾ ಸಿಬ್ಬಂದಿ ಬಲಿ