Select Your Language

Notifications

webdunia
webdunia
webdunia
webdunia

ಸಣ್ಣ ವ್ಯಾಪಾರಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ: ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಬುಧವಾರ, 23 ಜುಲೈ 2025 (13:14 IST)
ಬೆಂಗಳೂರು: ರಾಜ್ಯದ ಸಣ್ಣ ವ್ಯಾಪಾರಿಗಳ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ರಾಜ್ಯ ಸರಕಾರವು ವಾಣಿಜ್ಯ ತೆರಿಗೆ ಇಲಾಖೆಯಿಂದ ಬೀದಿಬದಿ ವ್ಯಾಪಾರಿಗಳು, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಡುತ್ತಿದೆ. ಇದು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲ ವ್ಯಾಪಾರಿಗಳು ಅತ್ಯಂತ ಭಯ, ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
 
ಮತ್ತೊಂದು ಕಡೆ ಮಾನ್ಯ ಮುಖ್ಯಮಂತ್ರಿಗಳು ಸೇರಿ ಸಚಿವ ಸಂಪುಟದ ಸದಸ್ಯರು ಕೇಂದ್ರ ಸರಕಾರವನ್ನು ದೂರುವ ಕುತಂತ್ರ ಮಾಡುತ್ತಿದ್ದಾರೆ. ಜಿಎಸ್‍ಟಿ ಸಂಗ್ರಹದ ವಿಷಯದಲ್ಲಿ ಕರ್ನಾಟಕವು ಮೊದಲ ಸ್ಥಾನಕ್ಕೆ ಬರಬೇಕೆಂದು ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಿರಂಗವಾಗಿಯೇ ಹೇಳಿದ್ದರು. ಮಹಾರಾಷ್ಟ್ರವನ್ನು ಹಿಂದಿಕ್ಕಿ ಅತಿ ಹೆಚ್ಚು ಜಿಎಸ್‍ಟಿ ಸಂಗ್ರಹ ಮಾಡಬೇಕೆಂದು ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಿದ್ದರು; ಅಧಿಕಾರಿಗಳಿಗೆ ಮೊತ್ತದ ಗುರಿಯನ್ನೂ ನೀಡಿದ್ದರು ಎಂದು ಗಮನ ಸೆಳೆದರು.
 
ಇದೀಗ ಸತ್ಯ ಗೊತ್ತಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರದ ಖಜಾನೆ ಖಾಲಿ ಆಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಕೊಡಿಸಿ ರಾಜ್ಯ ಸರಕಾರವೇ ವಸೂಲಿಗೆ ಇಳಿದಿದೆ ಎಂದು ಟೀಕಿಸಿದರು. ಬೀದಿಬದಿ ವ್ಯಾಪಾರಿಗಳು, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳಿಗೆ ನೀಡಿರುವ ನೋಟಿಸ್ ಸಂಪೂರ್ಣವಾಗಿ ಅಕ್ರಮವಾಗಿದೆ. ತಕ್ಷಣ ನೋಟಿಸ್ ಕೊಡುವುದನ್ನು ಸ್ಥಗಿತಗೊಳಿಸಬೇಕು. ಈಗಾಗಲೇ ಕೊಟ್ಟಿರುವ ನೋಟಿಸನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
 
ಹಾಲು ಮತ್ತಿತರ ಕೆಲ ವಸ್ತುಗಳು ಜಿಎಸ್‍ಟಿ ವ್ಯಾಪ್ತಿಗೆ ಬರುವುದಿಲ್ಲ; ಅಂಥವರಿಗೂ ನೋಟಿಸ್ ಕೊಟ್ಟಿದ್ದಾರೆ. ಜಿಎಸ್‍ಟಿ ವ್ಯವಸ್ಥೆಯಲ್ಲಿ 3 ಸ್ಲ್ಯಾಬ್‍ಗಳಿವೆ. ಎಲ್ಲರಿಗೂ ವಾಣಿಜ್ಯ ತೆರಿಗೆ ಇಲಾಖೆಯು ಶೇ 18ರ ತೆರಿಗೆ ಪಾವತಿಗೆ ನೋಟಿಸ್ ಕೊಡುತ್ತಿದೆ. ಖಜಾನೆ ಖಾಲಿ ಆಗಿದೆ ಎಂಬ ಕಾರಣಕ್ಕೆ ಯಾವುದನ್ನೂ ಪರಿಶೀಲಿಸದೆ, ವಿಮರ್ಶೆ ಮಾಡದೇ ರಾತ್ರೋರಾತ್ರಿ ನೋಟಿಸ್ ಕೊಡುತ್ತಿದ್ದು, ಎಲ್ಲ ವ್ಯಾಪಾರಿಗಳು ಭಯಭೀತರಾಗಿದ್ದಾರೆ. ಇಂಥ ಕೆಲಸಕ್ಕೆ ಕೈ ಹಾಕಿದ ರಾಜ್ಯ ಸರಕಾರವು ತಕ್ಷಣ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
 
ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ
ಕಾಂಗ್ರೆಸ್ ಪಕ್ಷದ ವತಿಯಿಂದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದ ಮುಂದೆ ಅನೇಕ ಬಾರಿ ಕಾಂಗ್ರೆಸ್ ಪುಡಾರಿಗಳು ದಾಂಧಲೆ ಮಾಡುವುದು, ಹೋರಾಟದ ನೆಪದಲ್ಲಿ ಗಲಾಟೆ ಮಾಡುವುದು ನಡೆದಿದೆ. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ. ನಿಮ್ಮ ಪೊಲೀಸ್ ವ್ಯವಸ್ಥೆಯನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷದ ಕಚೇರಿ ಮುಂದೆ ಹೋರಾಟ ಮಾಡುವ ಶಕ್ತಿ ನಮ್ಮ ಕಾರ್ಯಕರ್ತರಿಗೂ ಇದೆ. ನಿಮ್ಮ ಕಾರ್ಯಕರ್ತರಿಗೆ ಹೋರಾಟದ ಚಟ ಇದ್ದರೆ ಫ್ರೀಡಂಪಾರ್ಕ್ ಇದೆ ಎಂದು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಲು ಬಯಸುವುದಾಗಿ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಪದೇಪದೇ ಹೋರಾಟದ ನೆಪದಲ್ಲಿ ಗೂಂಡಾವರ್ತನೆ ಮಾಡುತ್ತಿದ್ದಾರೆ. ಇದು ಖಂಡಿತ ಸರಿಯಲ್ಲ ಎಂದು ಎಚ್ಚರಿಸಿದರು. ಪಕ್ಷದ ಕಡೆಯಿಂದ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ, ಇದನ್ನು ನಿಲ್ಲಿಸಲು ಈಗಾಗಲೇ ಮನವಿ ಮಾಡಿದ್ದೇವೆ ಎಂದರಲ್ಲದೆ, ಇಂಥ ಬೆಳವಣಿಗೆಯಿಂದ ಹಿಂದೆ ಸರಿಯುವಂತೆ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದರು.
 
 
ಸಿಎಂಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಿಲ್ಲ
ಪ್ರಶ್ನೆಗೆ ಉತ್ತರಿಸಿದ ಅವರು, ಮುಡಾ ಹಗರಣ ಸಂಬಂಧ ಇ.ಡಿ. ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದನ್ನು ಒಪ್ಪಿಕೊಳ್ಳುತ್ತೇನೆ. ಕೆಲವು ಸೂಕ್ಷ್ಮ ಅಂಶಗಳನ್ನು ನ್ಯಾಯಾಲಯ ಗಮನಿಸಿದ್ದು, ಅದನ್ನೂ ಒಪ್ಪಿಕೊಳ್ಳುವೆ. ಆದರೆ, ಮುಡಾ ಹಗರಣದಲ್ಲಿ ಸಿಲುಕಿ ಹಾಕಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರು ಈ ಹಗರಣದ ಭಾಗೀದಾರರು ಎಂಬ ಬಿಜೆಪಿ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅವರು ನಿರಪರಾಧಿ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ಇವತ್ತು ಕೂಡ ಆರೋಪಿಯಾಗಿದ್ದಾರೆ ಎಂದು ತಿಳಿಸಿದರು.
ಇದು ಸಿಬಿಐಗೆ ಹೋಗುವಂಥ ಪ್ರಕರಣ. 14 ನಿವೇಶನಗಳು ಸಿಎಂ ಕುಟುಂಬಕ್ಕೆ ಸಂಬಂಧಿಸಿವೆ. 5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳು ರಿಯಲ್ ಎಸ್ಟೇಟ್ ಏಜೆಂಜರ ಮೂಲಕ ಮಾರಾಟ ಆಗಿವೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
 
ಧರ್ಮಸ್ಥಳದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರ ಇದೀಗ ಎಸ್‍ಐಟಿ ರಚಿಸಿದೆ. ಶೀಘ್ರದಲ್ಲಿ ತನಿಖೆ ಆಗಲಿ. ಪಾರದರ್ಶಕ ತನಿಖೆ ಆಗಿ ಸತ್ಯಾಂಶ ಹೊರಬರಬೇಕೆಂಬುದು ಎಲ್ಲರ ಆಶಯವಾಗಿದೆ. ಈ ವಿಚಾರ ಇಟ್ಟುಕೊಂಡು ಅಲ್ಲಿನ ವಾತಾವರಣ ಹಾಳು ಮಾಡುವ, ಅಲ್ಲಿನ ವ್ಯವಸ್ಥೆ ಹಾಳು ಮಾಡುವುದು, ಅಪಪ್ರಚಾರ ಮಾಡುವುದನ್ನು ಸರಕಾರ ತಡೆಯಬೇಕು. ಇದರ ಹಿಂದಿನ ಕುತಂತ್ರ ನಮಗೂ ತಿಳಿದಿದೆ. ಅಲ್ಲಿನ ವ್ಯವಸ್ಥೆ ಹಾಳು ಮಾಡಲು ಮುಂದಾದರೆ ಏನು ಮಾಡಬೇಕೆಂದು ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
 
ತಪ್ಪಿಸಿಕೊಳ್ಳುವ ಷಡ್ಯಂತ್ರ, ಕುತಂತ್ರ?
ಅಧಿವೇಶನ ಪ್ರಾರಂಭ ಆಗಲಿದೆ. ಆಡಳಿತ ಪಕ್ಷದ ಶಾಸಕರು ಹಾದಿಬೀದಿಯಲ್ಲಿ ಮುಖ್ಯಮಂತ್ರಿಗಳ ಮರ್ಯಾದೆ ತೆಗೆಯುತ್ತಿದ್ದಾರೆ. ಅಧಿವೇಶನ ಸುಸೂತ್ರವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿಗಳು 50 ಕೋಟಿ ಅನುದಾನ ಘೋಷಿಸಿದ್ದಾರೆ. ಆದರೆ, ಅದು ಜಮಾ ಆಗಿಲ್ಲ. ಅಭಿವೃದ್ಧಿ ಕುರಿತು ಇನ್ನೂ ತೀರ್ಮಾನ ಆಗಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ತಪ್ಪಿಸಿಕೊಳ್ಳುವ ಷಡ್ಯಂತ್ರ, ಕುತಂತ್ರವೂ ಇದರಲ್ಲಿ ಇರಬಹುದು ಎಂದು ನುಡಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿ ಯೋಜನೆಯಿಂದಲೇ ಕರ್ನಾಟಕ ತಲಾ ಆದಾಯದಲ್ಲಿ ನಂ 1 ಎಂದ ರಣದೀಪ್ ಸುರ್ಜೇವಾಲ